ಬೆಂಗಳೂರಿನಲ್ಲಿರುವ ದಕ್ಷಿಣ ಭಾರತದ ಆಧಾರ್ ಕೇಂದ್ರವನ್ನು ತಮಿಳುನಾಡಿಗೆ ಸ್ಥಳಾಂತರಿಸಲು ಚಿಂತನೆ

ಬೆಂಗಳೂರು: ಬೆಂಗಳೂರಿನ ಹೃದಯ ಭಾಗದಲ್ಲಿರುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ದಕ್ಷಿಣ ಭಾರತ ಪ್ರಾದೇಶಿಕ ಕಚೇರಿಯು ಶಾಶ್ವತ ಕಚೇರಿ ಸ್ಥಾಪಿಸಲು ತುಂಡು ಭೂಮಿಯನ್ನು ಪಡೆಯುವ ತೀವ್ರ ಹೋರಾಟದ ನಂತರ ತಮಿಳುನಾಡಿಗೆ ಸ್ಥಳಾಂತರಗೊಳ್ಳಲು ಚಿಂತನೆ ನಡೆಸಿದೆ.

ಸುಮಾರು 10 ವರ್ಷಗಳಿಂದ ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತಿರುವ ಪ್ರಾದೇಶಿಕ ಕಚೇರಿಯು ಕಳೆದ ಮೂರು ವರ್ಷಗಳಿಂದ ಐದು ಎಕರೆ ಜಾಗವನ್ನು ಹುಡುಕುತ್ತಿದೆ ಆದರೆ ಅದು ವ್ಯರ್ಥವಾಗಿದೆ ಎಂದು ಮೂಲಗಳು ಹೇಳಿವೆ.

ಯುಐಡಿಎಐ ಕಚೇರಿಯು ಈಗ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದ ದಕ್ಷಿಣ ವಿಭಾಗದಲ್ಲಿದ್ದು, ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಲಕ್ಷದ್ವೀಪಗಳ ದಾಖಲಾತಿಗಳನ್ನು ನೋಡಿಕೊಳ್ಳುತ್ತದೆ. ಪ್ರತಿದಿನ ಸರಾಸರಿ 300 ರಿಂದ 400 ಸಂದರ್ಶಕರು ಬರುತ್ತಿದ್ದು, ಉತ್ತರ ಕರ್ನಾಟಕದಿಂದಲೂ ಹಲವು ಮಂದಿ ಬರುತ್ತಿದ್ದಾರೆ. ನಮ್ಮ ಚಟುವಟಿಕೆಗಳಿಗೆ ಉತ್ತಮ ಸ್ಥಳಾವಕಾಶ ಬೇಕು. ಈಗ ಇಲ್ಲಿ ತಿಂಗಳಿಗೆ 8 ಲಕ್ಷ ರೂ. ಬಾಡಿಗೆ ಕಟ್ಟುತ್ತಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.

ದೇಶವು ಎಂಟು ಪ್ರಾದೇಶಿಕ ಕಚೇರಿಗಳನ್ನು ಹೊಂದಿದ್ದು, ರಾಜ್ಯವಾರು ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ರಾಜ್ಯ ಮಟ್ಟದ ಕಚೇರಿಯನ್ನು ಸ್ಥಾಪಿಸಲು ಯುಐಡಿಎಐಗೆ ಭೂಮಿ ನೀಡಲು ತಮಿಳುನಾಡು ಮುಂದೆ ಬಂದಿದೆ. ಅವರು ನಮಗೆ ದೊಡ್ಡದಾದ ಭೂಮಿಯನ್ನು ನೀಡಲು ಸಾಧ್ಯವಾದರೆ, ನಾವು ಅಲ್ಲಿಗೆ ಸ್ಥಳಾಂತರಿಸಲು ಯೋಚಿಸುತ್ತಿದ್ದೇವೆ. ನಾವು ಬೆಂಗಳೂರಿನಿಂದ ಅನತಿ ದೂರದಲ್ಲಿರುವ ಹೊಸೂರಿನಂತಹ ಪ್ರದೇಶವನ್ನು ನೋಡುತ್ತಿರುವುದಾಗಿ ಮೂಲಗಳು ತಿಳಿಸಿವೆ.

ನಮಗೆ ಮೂರು ಎಕರೆ ಜಾಗ ಸಿಕ್ಕರೂ ಪರವಾಗಿಲ್ಲ. ಯಲಹಂಕ ಮತ್ತು ಈಗ ಕೆಆರ್ ಪುರಂನಲ್ಲಿ ಪ್ರಯತ್ನಿಸುತ್ತಿದ್ದೇವೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು. ಯುಐಡಿಎಐನ ಉನ್ನತ ಅಧಿಕಾರಿಗಳು ಇತ್ತೀಚೆಗೆ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿದ್ದು, ಕೆಆರ್ ಪುರಂಲ್ಲಿ ಜಾಗ ಪರಿಶೀಲಿಸುವಂತೆ ಕೇಳಿಕೊಂಡಿದ್ದರು. ಯುಐಡಿಎಐ ಮತ್ತು ಇತರ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ತಲುಪಿದರು. ಆದರೆ ಇಂತಹ ಸಮಸ್ಯೆಗಳಲ್ಲಿ ಪ್ರಮುಖರಾದ ತಹಶೀಲ್ದಾರ್ ಬಂದಿರಲಿಲ್ಲ. ಆ ಜಾಗದಲ್ಲಿ ಜಮೀನು ಬೇಕಿದ್ದರೆ ಆ ಪ್ರದೇಶದ ಶಾಸಕರ ಜತೆ ಮಾತನಾಡುವಂತೆ ತದನಂತರ ಅವರು ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ಯುಐಡಿಎಐನ ಉಪ ಮಹಾನಿರ್ದೇಶಕ ಆರ್ ಎಸ್ ಗೋಪಾಲನ್ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮಾತನಾಡಿ, ಯುಐಡಿಎಐ ಅಧಿಕಾರಿಗಳು ಇದನ್ನು ಸರ್ಕಾರದೊಂದಿಗೆ ಅನುಸರಿಸಬೇಕು. ಭೂಮಿಗಾಗಿ ಅವರ ಹೋರಾಟ ನನಗೆ ಆಘಾತ ತಂದಿದೆ” ಎಂದು ಅವರು ಹೇಳಿದರು.

ಹಲವು ಬಾರಿ ಪ್ರಯತ್ನಿಸಿದರೂ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಮತ್ತು ಕೆಆರ್ ಪುರಂ ಶಾಸಕ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಸಂಪರ್ಕಕ್ಕೆ ಸಿಗಲಿಲ್ಲ.

Leave a Reply

Your email address will not be published. Required fields are marked *