ಉಗ್ರ ಮಸೂದ್ ನನ್ನು ರಾಜಾತಿಥ್ಯದೊಂದಿಗೆ ಪಾಕಿಸ್ತಾನಕ್ಕೆ ಕಳುಹಿಸಿದ್ದು ಬಿಜೆಪಿಯಲ್ಲವೇ?: ರಾಹುಲ್ ಗಾಂಧಿ ಪ್ರಶ್ನೆ

ನ್ಯೂಸ್ ಕನ್ನಡ ವರದಿ: ಎರಡು ದಿನಗಳ ಹಿಂದೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿರುವ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮಸೂದ್ ಅಜರ್‍ನನ್ನು ಭಾರತದಿಂದ ಬಿಟ್ಟವರು ಯಾರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಗೆ ತಿರುಗೇಟು ನೀಡಿದ್ದಾರೆ. ಮಸೂದ್ ಅಜರ್‍ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ನಮ್ಮ ಸರ್ಕಾರ ತೆಗೆದುಕೊಂಡ ಬಿಗಿಕ್ರಮಗಳು ಎಂದು ಹೇಳುತ್ತಾ ಬಿಜೆಪಿ ಅದರ ಲಾಭ ಪಡೆಯಲು ಮುಂದಾಗಿರುವ ಬೆನ್ನಲ್ಲೇ ರಾಹುಲ್ ಗಾಂಧಿ, ಪ್ರಧಾನಿಗೆ ಟಾಂಗ್ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸೂದ್ ಅಜರ್‍ನನ್ನು ಭಾರತೀಯ ಸೇನೆ ಬಂಧಿಸಿ ಜಮ್ಮುಕಾಶ್ಮೀರದ ಜೈಲಿನಲ್ಲಿಟ್ಟಿತ್ತು. ಆತನನ್ನು ಕಾಬೂಲ್‍ಗೆ ವಿಮಾನದಲ್ಲಿ ಕರೆದುಕೊಂಡು ರಾಜ ಆತಿಥ್ಯದೊಂದಿಗೆ ಬಿಟ್ಟು ಬಂದಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರ. ಅಂದಿನ ವಿದೇಶಾಂಗ ಸಚಿವರಾಗಿದ್ದ ಜಸ್ವಂತ್‍ಸಿಂಗ್ ಕಾಬೂಲ್ ಗೆ ಹೋಗಿರಲಿಲ್ಲವೇ ಎಂದು ಪ್ರಶ್ನಿಸಿದರು. ಮಸೂರ್ ಅಜರ್ ಒಬ್ಬ ಭಯೋತ್ಪಾದಕ. ಆತನಿಗೆ ಶಿಕ್ಷೆಯಾಗಲೇಬೇಕು. ಭಯೋತ್ಪಾದಕರು ಮತ್ತು ಭಯೋತ್ಪಾದನೆಯಲ್ಲಿ ಕಾಂಗ್ರೆಸ್ ಎಂದಿಗೂ ರಾಜಿಯಾಗಲೇ ಇಲ್ಲ. ದುಧೋರಣೆಯನ್ನೂ ಅನುಸರಿಸಿಲ್ಲ. ಬಿಜೆಪಿ ಈತನನ್ನು ರಕ್ಷಣೆ ಮಾಡಿಪಾಕಿಸ್ತಾನಕ್ಕೆ ಬಿಟ್ಟಿತ್ತೆ ಹೊರತು ಕಾಂಗ್ರೆಸ್ ಅಲ್ಲ ಎಂದು ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *