ಇಕ್ಕಟ್ಟಿನಲ್ಲಿ ಸರ್ಕಾರ: ಇಂದು ಸಂಜೆ ರಾಜ್ಯದ ಕಾಂಗ್ರೆಸ್ ನ ಎಲ್ಲಾ ಸಚಿವರ ರಾಜೀನಾಮೆ?

ನ್ಯೂಸ್ ಕನ್ನಡ ವರದಿ: ರಾಜಕೀಯ ಪರಿಸ್ಥಿತಿ ಉಲ್ಬಣಿಸಿದ ಬೆನ್ನಲ್ಲೇ ಕಾಂಘ್ರೆಸ್ ಎಲ್ಲಾ ಸಚಿವರು ರಾಜೀನಾಮೆ ನೀಡಿ ಸಂಪುಟ ಪುನಾರಚನೆಗೆ ಸಹಕರಿಸಬೇಕೆಂದು ಹೈಕಮಾಂಡ್ ಕಟ್ಟಪ್ಪಣೆ ಮಾಡಿದೆ. ತಮಿಳುನಾಡಿನ ಕಾಮರಾಜ ಸೂತ್ರವನ್ನು ಅನುಸರಿಸಿ ಸಮ್ಮಿಶ್ರ ಸರ್ಕಾರವನ್ನು ಕಾಪಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. 13 ಮಂದಿ ಶಾಸಕರು ರಾಜೀನಾಮೆ ನೀಡಿದರೆ ಸಮ್ಮಿಶ್ರ ಸರ್ಕಾರ ಪತನವಾಗುವುದು ಖಚಿತವಾಗಿದೆ. ಆದರೆ ಹೈಕಮಾಂಡ್‍ಗೆ ಸಮ್ಮಿಶ್ರ ಸರ್ಕಾರ ಕಳೆದುಕೊಳ್ಳಲು ಇಷ್ಟವಿಲ್ಲ.

ರಾಜ್ಯದ ನಾಯಕರು ಸರ್ಕಾರ ಹೋದರೇ ಹೋಗಲಿ ಎಂಬ ಭಾವನೆ ಹೊಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಿದ್ದು, ಎಲ್ಲಾ ಸಚಿವರು ಹಾಗೂ ಉಪಮುಖ್ಯಮಂತ್ರಿ ಸಹಿತ ರಾಜೀನಾಮೆ ನೀಡಬೇಕೆಂದು ಸೂಚನೆ ರವಾನಿಸಿದೆ. ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಬೇಕಾದರೆ ಸಂಪುಟ ಪುನಾರಚನೆಯಾಗಲೇಬೇಕು. ಅದಕ್ಕಿರುವ ಮಾರ್ಗ ಎಂದರೆ ಅತೃಪ್ತರಿಗೆ ಸಚಿವ ಸ್ಥಾನ ನೀಡುವುದು. ಹೊಸಬರಿಗೆ ಅವಕಾಶ ಮಾಡಿಕೊಡಬೇಕಾದರೆ ಈಗಾಗಲೇ ನಾಲ್ಕು ತಿಂಗಳಿಂದ ಅಧಿಕಾರ ಅನುಭವಿಸಿರುವ ಸಚಿವರು ರಾಜೀನಾಮೆ ನೀಡಬೇಕು ಎಂದು ಹೈಕಮಾಂಡ್ ಸೂಚನೆ ನೀಡಿದೆ.

ಇಂದು ಸಂಜೆ ನಡೆಯುವ ಕಾಂಗ್ರೆಸ್‍ನ ಮಹತ್ವದ ಸಭೆಯಲ್ಲಿ ಸಚಿವರಿಗೆ ರಾಜೀನಾಮೆ ನೀಡಲು ಸೂಚಿಸಲಾಗುತ್ತದೆ ಎಂದು ಹೇಳಲಾಗಿದೆ. ರಾಜಕೀಯ ಕ್ಷಣ ಕ್ಷಣಕ್ಕೂ ಮಹತ್ವದ ತಿರುವು ಪಡೆಯುತ್ತಿದ್ದು, ಸರ್ಕಾರ ಉಳಿಯುತ್ತದೋ ಅಳಿಯುತ್ತದೋ ಎಂಬ ಗೊಂದಲಗಳು ತೀವ್ರವಾಗಿ ಕಾಡಲಾರಂಭಿಸಿದೆ.

Leave a Reply

Your email address will not be published. Required fields are marked *