ಮುಂಬೈನಲ್ಲಿ ಘನಘೋರ ದುರಂತ: ಬಹುಮಹಡಿ ಕಟ್ಟಡ ಕುಸಿದು 20 ಜನರ ಸಾವು!

ನ್ಯೂಸ್ ಕನ್ನಡ ವರದಿ:- ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಶಿಥಿಲಾವಸ್ಥೆಯ ಬಹುಅಂತಸ್ತುಗಳ ಕಟ್ಟಡ ಕುಸಿತ ಪ್ರಕರಣಗಳು ಆತಂಕಕಾರಿಯಾಗಿ ಮುಂದುವರಿದಿರುವಾಗಲೇ ಡೊಂಗ್ರಿ ಪ್ರದೇಶದಲ್ಲಿ ಇಂದು ಮಧ್ಯಾಹ್ನ 4 ಮಹಡಿಗಳ ಬಿಲ್ಡಿಂಗ್ ಕುಸಿದು 20 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ.

ಇನ್ನೂ ಕೆಲವು ಮಂದಿ ಭಗ್ನಾವಶೇಷ ಅಡಿ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ದಕ್ಷಿಣ ಮುಂಬೈನ ಡೊಂಗ್ರಿ ಪ್ರದೇಶದ ತಂಡೆಲ್ ರಸ್ತೆಯಲ್ಲಿದ್ದ ಕೇಸರಬಾಯಿ 4ಅಂತಸ್ತುಗಳ ಕಟ್ಟಡ ಇಂದು 11.50ರಲ್ಲಿ ಹಠಾತ್ ಕುಸಿದು ಬಿತ್ತು. ಈ ಘಟನೆ ನಡೆದಾಗ 40 ರಿಂದ 50 ಮಂದಿ ಈ ಕಟ್ಟಡದಲ್ಲಿದ್ದರು.

ಕೆಲವರನ್ನು ರಕ್ಷಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ವಾಹನಗಳೊಂದಿಗೆ ಧಾವಿಸಿದ ಸಿಬ್ಬಂದಿ ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ಕಾರ್ಯಕರ್ತರೊಂದಿಗೆ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(ಎನ್‍ಡಿಆರ್‍ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳ(ಎಸ್‍ಡಿಆರ್‍ಎಫ್) ಸಿಬ್ಬಂದಿ ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗಿದ್ದಾರೆ. ಬೃಹನ್ ಮುಂಬೈ ನಗರ ಪಾಲಿಕೆ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಉಸ್ತುವಾರಿ ವಹಿಸಿದ್ದಾರೆ.

Leave a Reply

Your email address will not be published. Required fields are marked *