ಕಾಂಗ್ರೆಸ್ ನೀವು ಕಟ್ಟಿದ ಮನೆ, ಬಿಜೆಪಿಯ ಬಣ್ಣದ ಮಾತು ನಂಬಿ ಹಾಳಾಗಬೇಡಿ!: ಡಿಕೆಶಿ

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ತೀವ್ರ ರಾಜಕೀಯ ಬೆಳವಣಿಗೆಗಳ ಸಂಬಂಧಿಸಿದಂತೆ ಕ್ಷಣಕ್ಷಣಕ್ಕೂ ಹೊಸ ತಿರುವು ಕಂಡುಬರುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಶತಾಯ ಗತಾಯ ಕೆಡವಿ ಬಿಜೆಪಿ ನೇತೃತ್ವದ ಸರ್ಕಾರ ನಿರ್ಮಾಣ ಮಾಡಬೇಕೆಂದು ಪಣತೊಟ್ಟಿರುವ ಯಡಿಯುರಪ್ಪ ಈ ಬಾರಿ ತಮ್ಮ ಆಪರೇಷನ್ ಕಮಲವನ್ನು ಬಹಳಷ್ಟು ಮುನ್ನೆಚ್ಚರಿಕೆಯಿಂದ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ಮಂಗಳವಾರ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೊತೆ ನಡೆದ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ “ಬಿಜೆಪಿಯವರನ್ನು ನಂಬಿಕೊಂಡು ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ, ಅವರು ನಿಮ್ಮನ್ನು ಯಾಮಾರಿಸುತ್ತಿದ್ದಾರೆ, ವಾಪಸ್ ಬಂದು ಬಿಡಿ” ಎಂದು ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಮನವಿ ಮಾಡಿದರು.

“ನೋಡಿ, ನಾವೆಲ್ಲರೂ ಅಣ್ಣ-ತಮ್ಮಂದಿರು ಇದ್ದಂತೆ. ನಮ್ಮ ನಡುವೆ ಏನೇ ಸಮಸ್ಯೆಗಳಿದ್ದರೂ ಅದನ್ನು ಕೂತು ಪರಸ್ಪರ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳೊಣ. ನಿಮಗಾಗಿ ಎಲ್ಲ ನಾಯಕರು ತ್ಯಾಗ ಮಾಡಲು ಸಿದ್ಧರಿದ್ದಾರೆ, ವಾಪಸ್ ಬಂದು ಸರಕಾರದ ಜೊತೆ ಸಂಧಾನ ಮಾಡಿಕೊಳ್ಳಿ, ನಿಮಗೆ ಏನು ಬೇಕು ಅದನ್ನು ಪಡೆದುಕೊಳ್ಳಿ. ಕಾಂಗ್ರೆಸ್ ಪಕ್ಷ ನೀವು ಕಟ್ಟಿದ ಮನೆ, ಇದನ್ನು ಬಿಟ್ಟು ನೀವು ಬೇರೆ ಕಡೆ ಹೋಗಲು ಯಾಕೆ ಪ್ರಯತ್ನ ಪಡುತ್ತಿದ್ದೀರಾ” ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *