ರೆಸಾರ್ಟ್ ನಲ್ಲಿದ್ದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ರಾತ್ರೋರಾತ್ರಿ ನಾಪತ್ತೆ!

ನ್ಯೂಸ್ ಕನ್ನಡ ವರದಿ: ಇಂದು ವಿಶ್ವಾಸಮತದ ಹಿನ್ನೆಲೆಯಲ್ಲಿ ರಾತ್ರಿಯೂ ಭಾರೀ ಹೈಡ್ರಾಮಾ ನಡೆದಿದೆ. ಇಷ್ಟು ದಿನ ಸೈಲೆಂಟಾಗಿದ್ದ ರಮೇಶ್ ಜಾರಕಿಹೊಳಿ ಆಪ್ತ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಕಳೆದ ರಾತ್ರಿ ದಿಢೀರ್ ಕಾಂಗ್ರೆಸ್ ಶಾಸಕರು ತಂಗಿರುವ ದೇವನಹಳ್ಳಿಯ ಪ್ರಕೃತಿ ರೆಸಾರ್ಟಿನಿಂದ ನಾಪತ್ತೆಯಾಗಿದ್ದಾರೆ.

ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಕೂಡ ರೆಸಾರ್ಟಿನಿಂದ ಹೊರಗೆ ಹೋಗಲು ಯತ್ನಿಸಿದ್ದರು. ಆದರೆ ಕಾಂಗ್ರೆಸ್‍ನ ಕಾರ್ಯಕರ್ತರು ಅವಕಾಶ ಕೊಡಲಿಲ್ಲ. ಕಾರಿನ ಮುಂದೆ ಹೋಗಿ ಕುಳಿತುಬಿಟ್ಟಿದ್ದಾರೆ. ಕೊನೆಗೆ ಬೇರೆ ಗತಿ ಇಲ್ಲದೇ ನಾರಾಯಣ ಸ್ವಾಮಿ ಮತ್ತೆ ರೆಸಾರ್ಟ್ ಸೇರಿಕೊಂಡಿದ್ದಾರೆ.

ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಕೂಡ ನಾಪತ್ತೆಯಾಗಿದ್ದಾರೆ ಎನ್ನಲಾಗಿತ್ತು. ಆದರೆ ಅನಾರೋಗ್ಯದ ಕಾರಣ ನಾಯಕರ ಅನುಮತಿ ಪಡೆದು ಮನೆಗೆ ಬಂದಿದ್ದಾರೆ ಎಂದು ಮುನಿಯಪ್ಪ ಪುತ್ರ ತಿಳಿಸಿದ್ದಾರೆ. ರಾತ್ರಿ ಸಿಎಂ ಕಾಂಗ್ರೆಸ್ ಶಾಸಕರಿದ್ದ ರೆಸಾರ್ಟ್‍ಗೆ ಭೇಟಿ ನೀಡಿ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ನಂತರ ತಮ್ಮ ಪಕ್ಷದ ಶಾಸಕರು ಉಳಿದುಕೊಂಡಿದ್ದ ರೆಸಾರ್ಟಿಗೆ ಹೋಗಿದ್ದಾರೆ.

ಇತ್ತ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಬೆಳಗ್ಗೆ 9 ಗಂಟೆಗೆ ರೆಸಾರ್ಟಿನಿಂದ ವಿಧಾನಸೌಧಕ್ಕೆ ಹೊರಡುವ ಬಿಜೆಪಿ ಶಾಸಕರಿಗೆ ಯಲಹಂಕ ಕ್ಷೇತ್ರದಲ್ಲಿ ಹೂವಿನ ಮಳೆ ಸ್ವಾಗತ ನೀಡಲು ಸಿದ್ಧತೆ ನಡೆದಿದೆ. ಎಲ್ಲಾ ಪಕ್ಷಗಳು ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿವೆ.

Leave a Reply

Your email address will not be published. Required fields are marked *