ಪದಗ್ರಹಣದ ನಂತರ ಯಡ್ಡಿಗೆ ಟೆನ್ಶನ್ ಗಳ ಸರಮಾಲೆ: ಸಿಎಂ ಪಟ್ಟ ಅಂದ್ರೆ ಮುಳ್ಳಿನ ಸಿಂಹಾಸನ!

ನ್ಯೂಸ್ ಕನ್ನಡ ವರದಿ : ಮೈತ್ರಿ ಸರ್ಕಾರ ಪತನವಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯೇರಿ ಕುಳಿತಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಕೂಡ ಆಯಿತು. ನಾಲ್ಕನೇ ಬಾರಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಮಹತ್ವಾಕಾಂಕ್ಷೆಯಂತೆ ಅದ್ದೂರಿ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪರಿಗೆ ಪದಗ್ರಹಣದ ಜೊತೆ ಟೆನ್ಶನ್ ಗಳ ಸರಮಾಲೆ ಕೂಡ ಉಡುಗೊರೆಯಾಗಿ ದೊರೆತಿದೆ. ಬಿಎಸ್​ವೈ ಸೋಮವಾರದ ಒಳಗಾಗಿ ಬಹುಮತ ಸಾಬೀತುಪಡಿಸಬೇಕು. ಇಲ್ಲದಿದ್ದರೆ ಮತ್ತೆ ಮೂರು ದಿನದಲ್ಲಿ ಅಧಿಕಾರ ಕಳೆದುಕೊಂಡ ಕುಖ್ಯಾತಿಗೆ ಅವರು ಒಳಗಾಗುತ್ತಾರೆ. ಅಲ್ಲದೆ, ಅಷ್ಟರೊಳಗೆ ಸಚಿವ ಸಂಪುಟವನ್ನೂ ರಚಿಸಬೇಕು. ಆದರೆ, ಪಕ್ಷದಲ್ಲಿರುವ ಎಲ್ಲರೂ ಸಚಿವ ಸ್ಥಾನದ ಆಕಾಂಕ್ಷಿಗಳೆ. ಈ ಎರಡೂ ಸವಾಲುಗಳನ್ನು ಯಡಿಯೂರಪ್ಪ ಹೇಗೆ ನಿಭಾಯಿಸಲಿದ್ದಾರೆ ಎಂಬುದು ಪ್ರಸ್ತುತ ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಅವರು ಇಂದು ದೆಹಲಿಗೆ ಪ್ರಯಾಣಿಸಿ ವರಿಷ್ಠರ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಮೂವರು ಶಾಸಕರ ಅನರ್ಹತೆಯಿಂದಾಗಿ ರಾಜ್ಯದ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 221ಕ್ಕೆ ಇಳಿದಿದೆ. ಬಹುಮತದ ಮ್ಯಾಜಿಕ್ ನಂಬರ್ 111. ಇನ್ನೂ 13 ಜನ ಅತೃಪ್ತ ಶಾಸಕರ ರಾಜೀನಾಮೆ ಅರ್ಜಿಯನ್ನು ಸ್ಪೀಕರ್ ಇತ್ಯರ್ಥಪಡಿಸದ ಕಾರಣ ಈಗಲೂ ಮ್ಯಾಜಿಕ್ ನಂಬರ್ ಅಷ್ಟೆ ಇದೆ. ಆದರೆ, ಬಿಜೆಪಿ ಬಳಿ ಇರುವ ಶಾಸಕರ ಸಂಖ್ಯೆ ಕೇವಲ 105 ಮಾತ್ರ. ಹೀಗಾಗಿ ಸೋಮವಾರ ಯಡಿಯೂರಪ್ಪ ಬಹುಮತವನ್ನು ಹೇಗೆ ಸಾಬೀತುಪಡಿಸಲಿದ್ದಾರೆ ಎಂಬುದು ಒಂದೆಡೆಯಾದರೆ, ಸಚಿವ ಸಂಪುಟ ಮತ್ತೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇನ್ನು ಡಿಸಿಎಂ ಹುದ್ದೆಯಿಂದ ಹಿಡಿದು ಸಚಿವ ಸ್ಥಾನಕ್ಕೆ ಅಂಟಿಕೊಂಡಿರುವ ಆಕಾಂಕ್ಷಿಗಳ ಜೊತೆ ಅತೃಪ್ತರಿಗೂ ಸೂಕ್ತ ಸ್ಥಾನಮಾನ ನೀಡಲೇಬೇಕಾದ ಒತ್ತಡ ಇದೀಗ ಯಡಿಯೂರಪ್ಪ ಅವರ ಮೇಲಿದೆ. ಈ ಎಲ್ಲಾ ಸವಾಲುಗಳನ್ನು ಸೋಮವಾರದ ಒಳಗಾಗಿ ನಿಭಾಯಿಸಲೇಬೇಕಾದ ದುಗುಡದಲ್ಲಿ ನೂತನ ಸಿಎಂ ಇಂದು ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

Leave a Reply

Your email address will not be published. Required fields are marked *