ಸಂಪುಟ ರಚನೆ ಮತ್ತೆ ಮುಂದೂಡಿಕೆ! ಸಿಎಂ ಯಡಿಯುರಪ್ಪನವರೇ ಏನು ಮಾಡ್ತಿದ್ದೀರಾ?

ನ್ಯೂಸ್ ಕನ್ನಡ ವರದಿ: ಉತ್ತರಕರ್ನಾಟಕ, ಕರಾವಳಿ, ಮಲೆನಾಡು, ಉತ್ತರ ಕನ್ನಡ, ಕೊಡಗು, ಧಾರವಾಡಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನರ ಜೀವ ಅಸ್ತವ್ಯಸ್ತಗೊಂಡಿದೆ. ಪ್ರವಾಹದಿಂದ ಜನರು ತತ್ತರಿಸುತ್ತಿದ್ದರೆ, ಮಂತ್ರಿಮಂಡಲವಿಲ್ಲದ  ಸಿಎಂ ದೆಹಲಿಯಲ್ಲಿ ಕುಳಿತಿದ್ದಾರೆ. ರಾಜ್ಯದ ಜನರ ಸಮಸ್ಯೆಯನ್ನು ಆಲಿಸಲು ಸರ್ಕಾರವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಟೀಕೆಗಳು ವಿಪಕ್ಷದಿಂದ ಕೇಳಿ ಬಂದ ಹಿನ್ನೆಲೆ ಸಿಎಂ ತಮ್ಮ ಪ್ರವಾಸ ಮೊಟಕುಗೊಳಿಸಿ ರಾಜ್ಯಕ್ಕೆ ಹಿಂದಿರುಗುತ್ತಿದ್ದಾರೆ.

ಬಹುದಿನಗಳಿಂದ ನಿರೀಕ್ಷಿಸಿದ್ದ ಸಚಿವ ಸಂಪುಟ ರಚನೆಗೆ ಈ ವಾರದಲ್ಲಿ ಹೈ ಕಮಾಂಡ್​ನಿಂದ ಅಂಕಿತ ಸಿಗಬಹುದೆಂಬ ವಿಶ್ವಾಸ ಮತ್ತೆ ಹುಸಿಯಾಗಿದೆ. ಸುಷ್ಮಾ ಸ್ವರಾಜ್​ ಅಗಲಿಕೆ ಜೊತೆ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಹಿನ್ನೆಲೆ ಸಿಎಂ ಬಿಎಸ್​ ಯಡಿಯೂರಪ್ಪ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದು, ಸಂಪುಟ ರಚನೆ ಕಸರತ್ತು ಇನ್ನೊಂದು ವಾರ ಮುಂದೂಡುವ ಸಾಧ್ಯತೆಗಳು ಹೆಚ್ಚಾಗಿವೆ.

ಈಗಾಗಲೇ ಏಕವ್ಯಕ್ತಿ ಆಡಳಿತ ನಡೆಸುತ್ತಿರುವ ಸಿಎಂ ಬಿಎಸ್​ ಯಡಿಯೂರಪ್ಪ ನಡೆಗೆ ವಿಪಕ್ಷಗಳು ಅಕ್ಷೇಪ ವ್ಯಕ್ತಪಡಿಸಿವೆ. ಹೈ ಕಮಾಂಡ್​ ನಿರ್ಧಾರದ ಹೊರತಾಗಿ ಬಿಎಸ್​ವೈ ಸಂಪುಟ ವಿಸ್ತರಣೆ ಅಸಾಧ್ಯವಾಗಿದೆ. ಇದೇ ಕಾರಣಕ್ಕೆ ಎರಡು ದಿನಗಳ ಹಿಂದೆ ದೆಹಲಿಗೆ ಹೋಗಿದ್ದ ಸಿಎಂ ಬಿಎಸ್​ವೈ ನಿನ್ನೆ ಪ್ರಧಾನಿ ಸೇರಿದಂತೆ ವಿವಿಧ ಕೇಂದ್ರ ಸಚಿವರನ್ನು ಭೇಟಿಯಾಗಿದ್ದರು. ಇಂದು ಅವರು ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಭೇಟಿಯಾಗಿ ಸಂಪುಟ ರಚನೆ ಬಗ್ಗೆ ಅಂತಿಮ ಪಟ್ಟಿ ಪಡೆಯಬೇಕಿತ್ತು.

Leave a Reply

Your email address will not be published. Required fields are marked *