ಪ್ರಧಾನಿ ಮೋದಿ ಜನ್ಮದಿನವನ್ನು ‘ರಾಷ್ಟ್ರೀಯ ನಿರುದ್ಯೋಗ ದಿನ’ ಎಂದು ಆಚರಿಸಿದ ನೆಟ್ಟಿಗರರು!

ನ್ಯೂಸ್ ಕನ್ನಡ ವರದಿ: ಪ್ರಧಾನಿ ನರೇಂದ್ರ ಮೋದಿ ಯವರು 70ನೇ ವರ್ಷದ ಹುಟ್ಟು ಹಬ್ಬದವನ್ನು ಇಂದು ಸೆಪ್ಟೆಂಬರ್ 17ರಂದು ಆಚರಿಸುತ್ತಿರುವ ಈ ಸಂದರ್ಭದಲ್ಲಿ ರಾತ್ರಿ 12 ನಂತರ ಟ್ವಿಟರ್ ನಲ್ಲಿ ನೆಟ್ಟಿಗರು ‘ರಾಷ್ಟ್ರೀಯ ನಿರುದ್ಯೋಗ ದಿನ’ ಎಂದು ಆಚರಣೆ ಮಾಡುತ್ತಾ ಟ್ವೀಟ್ ಮಾಡುತ್ತಿದ್ದಾರೆ.

ಮಧ್ಯರಾತ್ರಿಯಿಂದಲೇ ಟ್ವಿಟರ್ ನಲ್ಲಿ #NationalUnemploymentDay ಎಂದು ಟ್ವೀಟ್ ಮಾಡಿ ರಾಷ್ಟ್ರ ಮಟ್ಟದಲ್ಲಿ ಟ್ರೆಂಡ್ ಮಾಡಲಾಗುತ್ತಿದೆ. ಈ ಮೂಲಕ ವಿಶಿಷ್ಟ ರೀತಿಯಲ್ಲಿ ಕೆಲಸ ಕಳೆದುಕೊಂಡ ಯುವ ಜನತೆ ನಮಗೆ ಉದ್ಯೋಗ ನೀಡಿ ಎಂದು ಪ್ರತಿಭಟಿಸುತ್ತಿದೆ, ಭಾರತೀಯರು ಕೋಟಿಗಟ್ಟಲೆ ಉದ್ಯೋಗ ಕಳೆದುಕೊಂಡರೂ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಕುರಿತು ಯಾವುದೇ ಹೊಸ ಕ್ರಮ ಕೈಗೊಳ್ಳದ ಮತ್ತು ಈ ಕುರಿತು ಯಾವತ್ತೂ ಮಾತನಾಡದ ಪ್ರಧಾನಿಯವರು ಯುವ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವರ್ಷಕ್ಕೆ ಎರಡು ಕೋಟಿ ಹೊಸ ಉದ್ಯೋಗ ಸೃಷ್ಟಿಸುವ ಭರವಸೆ ಯುವಜನತೆಗೆ ನೀಡಿದ್ದ ಮೋದಿಯವರು 10 ಕೋಟಿ ಜನರ ಉದ್ಯೋಗ ನಷ್ಟವಾದರೂ ಯಾಕೆ ಯುವ ಜನತೆಯ ಪರವಾಗಿ ಮಾತನಾಡುತ್ತಿಲ್ಲ, ದೇಶದ ಬೆನ್ನೆಲುಬಾದ ಯುವಕರ ನಿರುದ್ಯೋಗ ಸಮಸ್ಯೆಗೆ ಏಕೆ ಸ್ಪಂದಿಸುವುದಿಲ್ಲ ಎಂದು ಪ್ರಶ್ನೆಗಳ ಸುರಿಮಳೆಗೈದರು.

ಬುಡಕಟ್ಟು ಜನಾಂಗದ ಪರ ಧ್ವನಿ ಎತ್ತುವ ‘ಟ್ರೈಬಲ್ ಆರ್ಮಿ’ ಎಂಬ ಸಂಘಟನೆ ಸ್ಥಾಪಕ, ಯುವ ಹೋರಾಟಗಾರ ಹನ್’ಸಲ್ ಮೆಹ್ತಾ ಟ್ವಿಟರ್ ನಲ್ಲಿ ಪ್ರಥಮವಾಗಿ ಪ್ರಧಾನಿಯವರ ಹುಟ್ಟುಹಬ್ಬದವನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಿಸೋಣ ಎಂದು ಘೋಷಿಸಿಕೊಂಡಿದ್ದರು, ಈ ಕರೆಗೆ ದೇಶಾದ್ಯಂತ ಜನರು ಈಗಾಗಲೇ ಹತ್ತು ಲಕ್ಷಕ್ಕೂ ಹೆಚ್ಚು ಟ್ವೀಟ್ ಮಾಡಿ ಸ್ಪಂದಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಯುವ ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲಿ ‘ರೋಜ್’ಗಾರ್ ದೋ’ (ಉದ್ಯೋಗ ನೀಡಿ) ಎಂದು ನಿರಂತರ ಅಭಿಯಾನ ನಡೆಸುತ್ತಾ ಬಂದಿದ್ದು, ಯುವ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇದೀಗ ಆ ಅಭಿಯಾನದ ಕೊಂಡಿಯಾಗಿರುವ ಇಂದಿನ ‘ರಾಷ್ಟ್ರೀಯ ನಿರುದ್ಯೋಗ ದಿನ’ ದ ಅಭಿಯಾನದಲ್ಲೂ ಯುವ ಕಾಂಗ್ರೆಸ್ ಪಾಲ್ಗೊಂಡಿದೆ. ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯಾದ NSUI ಯವರೂ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಪಾತಾಳಕ್ಕೆ ಕುಸಿದಿರುವ ಜಿಡಿಪಿ, ಇದು ದೇವರ ಕೆಲಸ ಎಂದು ಕೈ ಎತ್ತಿದ ವಿತ್ತ ಸಚಿವೆ, ಮನ್ ಕೀ ಬಾತ್ ನಲ್ಲಿ ಯುವ ಜನತೆಯ ಬಗ್ಗೆ ಸಂಪೂರ್ಣ ಮೌನ, ಕೊರೋನ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲ, ಸರ್ಕಾರದ ಆಸ್ತಿಗಳಾದ ಸಂಸ್ಥೆಗಳನ್ನು ಒಂದರ ನಂತರ ಒಂದು ಮಾರಾಟ, ವಿಧ್ಯಾರ್ಥಿಗಳ ಭವಿಷ್ಯದ ಬಗ್ಗೆ ಘೋರ ನಿರ್ಲಕ್ಷ, ಮೇಕ್ ಇನ್ ಇಂಡಿಯಾದ ವಿಫಲತೆ, ಹೆಚ್ಚುತ್ತಿರುವ ನಿರುದ್ಯೋಗಿಗಳ ಆತ್ಮಹತ್ಯೆ ಹೀಗೆ ಹಲವು ವಿಷಯವನ್ನು ಪ್ರಸ್ತಾಪಿಸಿ ರಾಷ್ಟ್ರೀಯ ನಿರುದ್ಯೋಗ ದಿನವನ್ನು ಸಾಮಾಜಿಕ ಜಾಲತಾಣದಲ್ಲಿ ಆಚರಿಸಿ ಪ್ರಧಾನಿಯವರಿಗೆ ಪ್ರಶ್ನಿಸಲಾಗುತ್ತಿದೆ.

Leave a Reply

Your email address will not be published. Required fields are marked *