ದೇಶದ ಬೆನ್ನೆಲುಬು ರೈತರನ್ನು ಭಯೋತ್ಪಾದಕರೆಂದ ಕಂಗನಾ! ಎತ್ತ ಸಾಗುತ್ತಿದೆ ಭಾರತ?

ಪ್ರಸಕ್ತ ಸಂಸತ್ ಅಧಿವೇಶದ ವೇಳೆ ವಿರೋಧ ಪಕ್ಷಗಳ ವಿರೋಧದ ನಡುವೆಯೂ, ತನ್ನದೇ ಸರ್ಕಾರದ ಮಂತ್ರಿಯೊಬ್ಬರ ರಾಜೀನಾಮೆಯ ಹೊರತಾಗಿಯೂ, ಸರ್ಕಾರ ದೇಶದ ರೈತರ ಮೇಲೆ ನೇರ ಪರಿಣಾಮ ಬೀರಲಿರುವ ಮೂರು ವಿಧೇಯಕಗಳಿಗೆ ಅಸ್ತು ಎಂದಿದೆ, ಅದೂ ಯಾವುದೇ ಚರ್ಚೆ ನಡೆಸದೆ, ಧ್ವನಿಮತದಿಂದ. ಉತ್ತರ ಭಾರತ, ಮಹಾರಾಷ್ಟ್ರ ಹಾಗೂ ದೇಶದ ಅನೇಕ ಕಡೆ ರೈತರು ಈ ವಿಧೇಯಕಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಅದರಲ್ಲೂ ಪಂಜಾಬ್, ಹರ್ಯಾಣಗಳಲ್ಲಿ ರೈತರ ಪ್ತತಿಭಟನೆ ತೀವೃತರವಾಗಿದೆ.

ಇವರ ಪ್ರತಿಭಟನೆಯನ್ನು ಕಂಡ ಪ್ರಧಾನಮಂತ್ರಿ ರೈತರನ್ನು ಉದ್ದೇಶಿಸಿ ಟ್ವಿಟ್ಟರ್ ನಲ್ಲಿ ಈ ವಿಧೇಯಕದಿಂದ ಸದ್ಯಕ್ಕೆ ರೈತರಿಗೆ ಕೊಡುತ್ತಿರುವ ಕನಿಷ್ಟ ಬೆಂಬಲ ಬೆಲೆ, ರೈತರ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸುವ ಪ್ರಕ್ರಿಯೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ, ಅವು ಎಂದಿನಂತೆಯೇ ಇರಲಿವೆ ಎಂದು ಆಶ್ವಾಸನೆಯಿತ್ತಿದ್ದಾರೆ (ಆದರೆ ವಿಧೇಯಕಗಳಲ್ಲಿ ಬೆಂಬಲ ಬೆಲೆಯ ಬಗ್ಗೆ ಒಂದಕ್ಷರವೂ ಇಲ್ಲವೆಂದು, ಪ್ರತಿಭಟನೆಯ ಭಾಗವಾಗಿರುವ ಆರ್ ಎಸ್‍ ಎಸ್ ನ ಭಾರತೀಯ ಕಿಸಾನ್ ಸಂಘ ಅಧಿಕೃತವಾಗಿ ಹೇಳಿಕೆ ಕೊಟ್ಟಿದೆ).

ಈ ಟ್ವೀಟಿಗೆ ಪ್ರತಿಕ್ರಿಯೆ ಕೊಡುತ್ತಾ ನಟಿ ಕಂಗನಾ ರಣೌತ್ ಪ್ರತಿಭಟಿಸುತ್ತಿರುವ ರೈತರನ್ನು ‘ಭಯೋತ್ಪಾದಕರಿಗೆ’ ಹೋಲಿಸಿ ಟ್ವೀಟ್ ಮಾಡಿದ್ದಾರೆ “ಪ್ರಧಾನ ಮಂತ್ರಿಯವರೇ ಮಲಗಿರುವವರನ್ನು ಎಬ್ಬಿಸಬಹುದು, ತಪ್ಪು ತಿಳುವಳಿಕೆ ಹೊಂದಿರುವವರಿಗೆ ತಿಳಿ ಹೇಳಬಹುದು. ಆದರೆ ಮಲಗಿರುವಂತೆ ನಟಿಸುವ, ತಿಳುವಳಿಕೆ ಇಲ್ಲದಿರುವಂತೆ ನಟಿಸುವವರಿಗೆ ನೀವು ತಿಳಿ ಹೇಳುವುದರಿಂದ ಏನಾದರೂ ವ್ಯತ್ಯಾಸವಾಗಬಹುದೇ? CAA ಯಿಂದ ದೇಶದ ಒಬ್ಬನೇ ಒಬ್ಬ ನಾಗರಿಕನ ಪೌರತ್ವ ರದ್ದಾಗದಿದ್ದರೂ, ದೇಶದೆಲ್ಲೆಡೆ ರಕ್ತದ ನದಿಗಳನ್ನು ಹರಿಸಿದ ಭಯೋತ್ಪಾದಕರೇ ಇವರು.”

ಈಕೆಯ ಪ್ರಕಾರ ದೇಶದಲ್ಲಿ ಪ್ರತಿಭಟನೆ ಮಾಡುವ, ಪ್ರಶ್ನಿಸುವ ಪ್ರತಿಯೊಬ್ಬರೂ ದೇಶದ್ರೋಹಿಗಳು ಹಾಗೂ ಭಯೋತ್ಪಾದಕರು. ರೈತರು ಈ ದೇಶದ ಬೆನ್ನೆಲುಬು, ಜೀವನಾಡಿ ಹಾಗೂ ಆಪ್ತರಕ್ಷಕರು. ಅವರಿಲ್ಲದಿದ್ದರೆ ಈ ದೇಶ ಇಲ್ಲ. ಪ್ರಧಾನಿ, ಕಂಗನಾ, ನಾನು, ನೀವು ಇವತ್ತು ಊಟ ಮಾಡಿದ್ದೇವೆಯೆಂದರೆ ಅದು ರೈತರ ಕಾರಣದಿಂದ. ತನ್ನ ಕೈಗಳನ್ನು ಕೆಸರು ಮಾಡುವ ರೈತ, ನಮ್ಮ ಬಾಯಿಗೆ ಮೊಸರು ತಂದಾಕುತ್ತಾನೆ. ಅಂಥ ರೈತರನ್ನು ಭಯೋತ್ಪಾದಕವೆಂದರೂ, ಒಬ್ಬನೇ ಒಬ್ಬ ತುಟಿಪಿಟಿಕ್ ಎನ್ನುತ್ತಿಲ್ಲ. ಉಲ್ಟ್ತಾ ಜೈಕಾರ ಹಾಕುತ್ತಿದ್ದಾರೆ.

ನಾನು ಪದೇ ಪದೇ ಹೇಳುತ್ತಿದ್ದೇನೆ ನಮ್ಮ ದೇಶದಲ್ಲಿ ಮನುಷತ್ವ, ನಾಚಿಕೆ ಆತ್ಮಹತ್ಯೆಗೈದು ನಾಲ್ಕೈದು ವರುಷಗಳೇ ಸಂದಿವೆ. ನಮ್ಮ ಸುತ್ತಮುತ್ತಲೂ ರಕ್ತಪಿಪಾಸು ಝೋಂಬಿಗಳು ಅಡ್ಡಾಡುತ್ತಿವೆ. ಸಿಕ್ಕಸಿಕ್ಕವರನ್ನು ನೇರವಾಗಿ ಇಲ್ಲವೇ ಸಾಮಾಜಿಕ ಜಾಲತಾಣಗಳಲ್ಲಿ ಮಾಬ್ ಲಿಂಚ್ ಮಾಡಿ ವಿಕೃತ ಅನಂದಪಡುವ ಹಿಂಸಾರಸಿಕರು ಈ ದೇಶದಲ್ಲಿ ಊಳಿಡುತ್ತಿದ್ದರೆ, ವಿವೇಚನೆ, ಕಾಮನ್‍ಸೆನ್ಸ್ ಅನಾಥವಾಗಿ ಪ್ರತೀಕ್ಷಣ ನರಳುತ್ತಿವೆ.

ಗ್ಲಾಡ್ಸನ್ ಅಲ್ಮೇಡಾ

Leave a Reply

Your email address will not be published. Required fields are marked *