ಪಾನ್ ಸಿಂಗ್ ತೋಮರನ ನಿಜವಾದ ಕಥೆ ಏನು ಗೊತ್ತೆ?

ನ್ಯೂಸ್ ಕನ್ನಡ ವರದಿ: ಉತ್ತರದ ರಾಜ್ಯಗಳೆಂದರೆ ಹಾಗೆ ಅದೊಂದು ಜಾತಿಕೊಂಪೆ. ಬಹುತೇಕ ಜನ ಜಾತಿಯನ್ನೇ ಉಸಿರಾಡುತ್ತಾರೆ. ಅದನ್ನೇ ತಿಂದುಂಡು ಮಲಗುತ್ತಾರೆ. ದಲಿತ ಹೆಣ್ಣುಮಗಳು ಮನೀಷಾಳನ್ನು ಮೇಲ್ವರ್ಗದ ಯುವಕರು ಅತ್ಯಾಚಾರ ಮಾಡಿ ಕೊಂದರು ಎಂದರೆ, ದಲಿತ ಎಂಬ ಪದ ಯಾಕ್ರೀ ಎಂದು‌ ಕೆಲವರು ಗೋಗರೆಯುತ್ತಾರೆ. ಆದರೆ ಜಾತಿಯ ಹಿನ್ನೆಲೆ ಇಲ್ಲದೆ ಆ ಹುಡುಗರು ಈಕೆಯನ್ನು ಅತ್ಯಾಚಾರ ಮಾಡಲು ಸಾಧ್ಯವಿರಲಿಲ್ಲ. ಆಕೆ ದಲಿತಳಾಗದೆ ಮೇಲ್ವರ್ಗದವಳೇ ಆಗಿದ್ದರೆ ಅವಳ ಮೇಲೆ ಅತ್ಯಾಚಾರ ನಡೆಯುತ್ತಿರಲಿಲ್ಲ. ಸತ್ಯ‌‌ ನಿಗಿನಿಗಿ ಕೆಂಡ. ಅದು ಸುಟ್ಟೇ ಸುಡುತ್ತದೆ.

ಪಾನ್ ಸಿಂಗ್ ತೋಮರ್ ಎಂಬ ಸಿನಿಮಾ ನೀವು ನೋಡಿರಬಹುದು. ಇರ್ಫಾನ್ ಖಾನ್ ಅದ್ಭುತ ನಟನೆಯ ಸಿನಿಮಾಗಳಲ್ಲಿ ಒಂದು. ಪಾನ್ ಸಿಂಗ್ ತೋಮರ್ ರಜಪೂತ ಎಂಬ ಮೇಲ್ವರ್ಗಕ್ಕೆ ಸೇರಿದವನು. ರಜಪೂತ ಎಂದರೆ ರಾಜರ ಮಗ ಎಂದರ್ಥ. ಉತ್ತರದ ಬಹುತೇಕ ರಾಜ್ಯಗಳಲ್ಲಿ ಅವರು ಪ್ರಭಾವಿಗಳು. ಪಾನ್ ಸಿಂಗ್ ತೋಮರ್ ಭಾರತ ಸೈನ್ಯದಲ್ಲಿ ಕೆಲಸ ಮಾಡಿ ನಿವೃತ್ತನಾದ ನಂತರ ಚಂಬಲ್ ಕಣಿವೆಯ ಅಪಾಯಕಾರಿ ಡಕಾಯಿತನಾಗಿ ಬದಲಾದವನು. ಪಾನ್ ಸಿಂಗ್ ಆ ಕಾಲದ ಒಳ್ಳೆಯ ಅಥ್ಲೀಟ್.‌ ಸ್ಟೀಪಲ್‌ಚೇಸ್ ಎಂಬ ಓಟದಲ್ಲಿ ನ್ಯಾಷನಲ್ ಚಾಂಪಿಯನ್. ಇದೇ ಓಟದಲ್ಲಿ ಏಷಿಯನ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದಾತ. ಇಂಥ ಸೈನಿಕ, ಅಥ್ಲೀಟ್ ಡಕಾಯಿತನಾಗಿ ಬದಲಾಗುವುದು ಸಿನಿಮಾ ಸಬ್ಜೆಕ್ಟೇ ತಾನೇ? ಸಿನಿಮಾ ಆಯಿತು, ನಾವೆಲ್ಲ ಇಷ್ಟಪಟ್ಟು ನೋಡಿದೆವು.

ಆದರೆ ಕೆಲವು ವಿಷಯಗಳನ್ನು ನಿರ್ದೇಶಕ ತಿಗ್ಮಾಂಶು ಧೂಲಿಯಾ ಜಾಣತನದಿಂದ, ಪ್ರಜ್ಞಾಪೂರ್ವಕವಾಗಿ ಮುಚ್ಚಿಟ್ಟುಬಿಟ್ಟರು. ಪಾನ್ ಸಿಂಗ್ ತೋಮರ್ ಮಹಾ ಜಾತಿವಾದಿಯಾಗಿದ್ದ. ಅವನ ರಜಪೂತ ಹೆಮ್ಮೆಯೇ ಅವನನ್ನು ದೊಡ್ಡ ಡಕಾಯಿತನಾಗಿ ಬೆಳೆಯಲು ಸಹಕಾರ ನೀಡಿತ್ತು. ಪೊಲೀಸ್ ಇಲಾಖೆಯಲ್ಲೂ ಅವನಿಗೆ ಸ್ವಜಾತಿಯ ಬಂಧುಗಳ ಬೆಂಬಲವಿತ್ತು.

ಪಾನ್ ಸಿಂಗ್ ತೋಮರ್ 1981ರ ಅಕ್ಟೋಬರ್ 1 ರಂದು ರತಿಯಂಕಪುರ ಎಂಬ ಗ್ರಾಮದಲ್ಲಿ ನಡೆದ ಪೊಲೀಸ್ ಎನ್ ಕೌಂಟರ್ ನಲ್ಲಿ ಸತ್ತುಹೋದ. ಅಷ್ಟು ಹೊತ್ತಿಗಾಗಲೇ ಅವನು ಕೊಂದವರ ಸಂಖ್ಯೆಯೇನೂ ಕಡಿಮೆಯಿರಲಿಲ್ಲ. ರಾಜಕೀಯವಾಗಿ ಪ್ರಭಾವಶಾಲಿಯಾಗಿರುವ ಗುಜ್ಜರ್ ಗಳ ನರಮೇಧದ ನಂತರ ಪೊಲೀಸರು ಅವನನ್ನು ಬೇಟೆಯಾಡುತ್ತಿದ್ದರು. ಅವತ್ತು ರತಿಯಂಕಪುರದಲ್ಲಿ ಹೆಚ್ಚು ಕಡಿಮೆ ಐನೂರು ಪೊಲೀಸರ ಸೈನ್ಯ ಅವನನ್ನು ಸುತ್ತುವರೆದಿತ್ತು. ಸುದೀರ್ಘ ಹನ್ನೆರಡು ಗಂಟೆಗಳ ಕಾಲದ ಗನ್ ಬ್ಯಾಟಲ್. ಅವನು ಬಚಾವಾಗುವ ಸಾಧ್ಯತೆ ಇರಲಿಲ್ಲ. ತನ್ನ ತಂಡದೊಂದಿಗೆ ಅವನು ಹತನಾದ. ಪೊಲೀಸ್ ತಂಡವನ್ನು ಮುನ್ನಡೆಸಿದವರು ಮಹೇಂದ್ರ ಪತಾಪ್ ಸಿಂಗ್ ಚೌಹಾಣ್.

ಪೊಲೀಸರ ಕೈಗೆ ಸಿಗದಂತೆ ಅಪಹರಣ, ಎಕ್ಟಾಸರ್ಷನ್, ಕೊಲೆಗಳನ್ನು ನಡೆಸುತ್ತಿದ್ದ ಪಾನ್ ಸಿಂಗ್ ತೋಮರ್ ಪೊಲೀಸರ ಕೈಗೆ ಸಿಕ್ಕಿದ್ದೇ ಒಂದು ರೋಚಕ ಕಥೆ. ಪಾನ್‌ ಸಿಂಗ್ ತೋಮರ್ ದಲಿತರನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಮತ್ತು ಸಂದರ್ಭ ಸಿಕ್ಕಾಗಲೆಲ್ಲ ಹಿಂಸಿಸುತ್ತಿದ್ದ. ಅಲ್ಪಸ್ವಲ್ಪ ಹಣವಿದ್ದ ದಲಿತರನ್ನು ಕಿಡ್ನಾಪ್ ಮಾಡಿ ದುಡ್ಡಿಗಾಗಿ ಪೀಡಿಸುತ್ತಿದ್ದ. ಅವರಿಗೆ ತಮ್ಮ ಮೇಲಾಗುತ್ತಿದ್ದ ದೌರ್ಜನ್ಯಗಳಿಗೆ ಸೇಡು ತೀರಿಸಿಕೊಳ್ಳಲು ಪವಾಡದಂಥ ಅವಕಾಶವೊಂದು ಒದಗಿ ಬಂದಿತ್ತು.

ಇನ್ಸ್ ಪೆಕ್ಟರ್ ಪ್ರತಾಪ್ ಸಿಂಗ್ ಚೌಹಾಣ್ ಒಮ್ಮೆ ರತಿಯಂಕಪುರ ಗ್ರಾಮಕ್ಕೆ ಬಂದಿದ್ದರು. ಅದು ಸುಮಾರು ನಾಲ್ಕುನೂರು ಮಂದಿ ದಲಿತರೇ ಇರುವ ಗ್ರಾಮ. ಆ ಗ್ರಾಮದವರನ್ನೂ ತೋಮರ್ ಕಿಡ್ನಾಪ್ ಮಾಡಿ, ಹಿಂಸೆ ನೀಡಿದ್ದ. ಇನ್ಸ್ ಪೆಕ್ಟರ್ ಬಂದಾಗ ಗ್ರಾಮದ ಹಿರಿಯರು ಅವರನ್ನು ಬರಮಾಡಿಕೊಂಡು ಆತಿಥ್ಯಕ್ಕೆ ಮುಂದಾದರು. ಪ್ರತಾಪ್ ಸಿಂಗ್ ಕ್ಷತ್ರಿಯ, ಹೀಗಿರುವಾಗ ದಲಿತರ ಮನೆಯ ನೀರು‌ ಕುಡಿಯಬಹುದೇ ಎಂಬ ಸಂದೇಹ ಅವರದು. ಪ್ರತಾಪ್ ಸಿಂಗ್ ಆ ಕಾಲದಲ್ಲೂ ಜಾತಿಯ ವಿಷವನ್ನು ಮೈ‌ಮನಸಿಗೆ ಬಿಟ್ಟುಕೊಂಡಿರಲಿಲ್ಲ. ಹೀಗಾಗಿ ಮೋತಿ ಎಂಬ ದಲಿತರ ಮನೆಯಲ್ಲಿ‌ ಲಸ್ಸಿ (ಸಿಹಿಮೊಸರು) ಕುಡಿಯುತ್ತಾರೆ. ಸಂತೋಷಗೊಂಡ ಕುಟುಂಬದವರು ಚಪಾತಿ, ತುಪ್ಪ ನೀಡುತ್ತಾರೆ. ಪ್ರತಾಪ್ ಸಿಂಗ್ ಅದನ್ನೂ ಸೇವಿಸುತ್ತಾರೆ. ಊಟದ ನಂತರ ಲೋಕಾಭಿರಾಮವಾಗಿ ಮಾತನಾಡುವಾಗ, ಸಾಹೇಬ್ ನಿಮಗಾಗಿ ನಾವೇನಾದರೂ ಮಾಡಬಹುದೇ? ಎಂದು ಕೇಳುತ್ತಾರೆ ಮೋತಿ. ಅಷ್ಟೇನು ಆಸಕ್ತಿಯಿಲ್ಲದೆ ಏನು ಮಾಡುತ್ತೀರಿ ಎನ್ನುತ್ತಾರೆ ಪ್ರತಾಪ್ ಸಿಂಗ್. ಅವನನ್ನು (ಪಾನ್ ಸಿಂಗ್ ತೋಮರ್) ಹಿಡಿದುಕೊಡಬಲ್ಲೆವು ನಾವು ಎನ್ನುತ್ತಾರೆ ಮೋತಿ. ಇನ್ಸ್ ಪೆಕ್ಟರ್ ಗೆ ಪರಮಾಶ್ಚರ್ಯ. ಉತ್ತರದ ಮೂರು ರಾಜ್ಯಗಳ ಪೊಲೀಸರಿಗೆ ಪಾನ್ ಸಿಂಗ್ ತೋಮರ್ ಬೇಕಾಗಿದ್ದ. ಅವನ ತಲೆಯ ಮೇಲೆ ಹತ್ತು ಸಾವಿರ ರುಪಾಯಿ ಬಹುಮಾನದ ಘೋಷಣೆಯಿತ್ತು.‌ ಅವನನ್ನು ಹಿಡಿದು ಕೊಲ್ಲಲೇಬೇಕೆಂಬ ಒತ್ತಡ ಪೊಲೀಸ್ ಇಲಾಖೆಯ ಮೇಲಿತ್ತು. ಪಾನ್ ಸಿಂಗ್ ತೋಮರ್ ಆ‌ ಕಾಲದ ಪ್ರೈಸ್ ಕ್ಯಾಚ್.

ಹಾಗೆ ಶುರುವಾಗಿದ್ದು ತೋಮರ್ ಗಾಗಿ ಬಲೆ ಬೀಸುವ ತಂತ್ರ. ಪಾನ್ ಸಿಂಗ್ ತೋಮರ್ ತಂಡದ ಒಬ್ಬ ಸದಸ್ಯನ‌‌ ಮೂಲಕ ಈ ಗ್ರಾಮದಲ್ಲಿ ತೋಮರ್ ತಂಡಕ್ಕೆ ಆಶ್ರಯ ನೀಡಲಾಗುತ್ತದೆ. ಮೊದಲೇ ನಿಗದಿಯಾದಂತೆ ಇನ್ಸ್ ಪೆಕ್ಟರ್ ಚೌಹಾಣ್ ತಂಡದೊಂದಿಗೆ ಬರುತ್ತಾರೆ. ಹೆಚ್ಚುವರಿ ತುಕಡಿಗಳನ್ನೂ ಕರೆಯಿಸಿಕೊಳ್ಳುತ್ತಾರೆ. ತಂಡದ ಉಳಿದವರೆಲ್ಲ ಸತ್ತರೂ ಪಾನ್ ಸಿಂಗ್ ಬದುಕಿರುತ್ತಾನೆ. ಪಾನ್ ಸಿಂಗ್, ದುರಹಂಕಾರದಿಂದ “ಉಚ್ಚೆ ಕುಡಿಯುವ ಪೊಲೀಸರು, ನೀವು ನನ್ನನ್ನೇನೂ ಮಾಡಲಾಗದು, ನಾನು ಪಾನ್ ಸಿಂಗ್ ತೋಮರ್” ಎಂದು ಮೆಗಾಫೋನ್ ನಲ್ಲಿ ಅಬ್ಬರಿಸುತ್ತಾನೆ. ಪೊಲೀಸರು ಅವನ ಧ್ವನಿ ಕೇಳಿಬಂದ ಕಡೆ ಫೈರ್ ಮಾಡುತ್ತಾರೆ.

ಗುಂಟೇಟು ತಿಂದು‌ ನಿತ್ರಾಣನಾಗಿದ್ದ ತೋಮರ್ ನೀರಿಗಾಗಿ ಅಂಗಲಾಚುತ್ತಾನೆ. ಆತನ‌ ತಂಡದಲ್ಲಿ‌ ಬದುಕುಳಿದಿದ್ದ ಬಲವಂತ್ ಸಿಂಗ್ ಎಂಬಾತ ನೀರು‌ಕೊಡಲು ನಿರಾಕರಿಸುತ್ತಾನೆ. ನೀರು ಕೊಡಲು ಬಂದರೆ ನನ್ನನ್ನೂ ಸಾಯಿಸುತ್ತಾರೆ ಎನ್ನುತ್ತಾನೆ ಬಲವಂತ್. ಈ ನಡುವೆ ಪೊಲೀಸ್ ಪಡೆ ತೋಮರ್ ಹತ್ತಿರ ಬರುತ್ತದೆ. ತೋಮರ್ ಪೊಲೀಸರಲ್ಲೂ‌ ನೀರಿಗಾಗಿ ಬೇಡುತ್ತಾನೆ. ಆಗ ಅವನು ಹೇಳುವ ಮಾತು ಮಾತ್ರ ಅವನ ಒಳಗಿನ ಜಾತಿ ಹಮ್ಮಿಗೆ, ಜಾತಿವಿಷಕ್ಕೆ ಹಿಡಿದ ಸಾಕ್ಷಿ. ”ಪೊಲೀಸ್ ಪಡೆಯಲ್ಲಿ ಯಾರೂ ರಜಪೂತರಿಲ್ಲವೇ? ನನಗೆ ನೀರು ಕೊಡಿ” ಎನ್ನುತ್ತಾನೆ. ಸಾಯುವ ಕೊನೆಯ ಕ್ಷಣದಲ್ಲೂ ಜಾತಿಯನ್ನೇ ಜೀವಿಸಿದ ಈ ಪ್ರಾಣಿ!

ಆಗ ತ್ರಿಭುವನ್ ಎಂಬ ಪೊಲೀಸ್ ಪೇದೆ ನೀರು ನೀಡಲು ಮುಂದಾಗುತ್ತಾನೆ, ಆತ ರಜಪೂತ. ಇನ್ಸ್ ಪೆಕ್ಟರ್ ಚೌಹಾಣ್ ಸಿಟ್ಟಿನಿಂದ, ಏನ್ ಮಾಡ್ತಾ ಇದ್ದೀಯ ಎಂದು ರೇಗುತ್ತಾರೆ. ನೀರು ಕೊಡ್ತೀನಿ ಸರ್ ಎನ್ನುತ್ತಾನೆ ತ್ರಿಭುವನ್. ನೀನು ನೀರು ಕೊಡಲು ಹೋದರೆ ನೀನೂ ಸಹ ಗುಂಟೇಟು ತಿನ್ನುತ್ತೀಯ. ಪೊಲೀಸರಿಗೆ ಯಾವ ಜಾತಿಯೂ ಇಲ್ಲ, ಹಾಗೆಯೇ ಡಕಾಯಿತರಿಗೂ ಅಷ್ಟೆ, ಅವರಿಗೂ ಯಾವ ಜಾತಿಯೂ ಇಲ್ಲ ಎನ್ನುತ್ತ ಪ್ರತಾಪ್ ಸಿಂಗ್ ಚೌಹಾಣ್ ತೋಮರ್ ಇದ್ದಕಡೆ ಇನ್ನಷ್ಟು ಫೈರ್ ಮಾಡುತ್ತಾರೆ, ತೋಮರ್ ಸತ್ತು ಬೀಳುತ್ತಾನೆ.

ವಾಸ್ತವವಾಗಿ ಪಾನ್ ಸಿಂಗ್ ತೋಮರ್ ಸಿನಿಮಾದಲ್ಲಿ ಹೀರೋ ಆಗಬೇಕಾಗಿದ್ದು ಪ್ರತಾಪ್ ಸಿಂಗ್ ಚೌಹಾಣ್ ಅಲ್ಲವೇ? ಸಿನಿಮಾ ನಿರ್ದೇಶಕ ಧೂಲಿಯಾ ಈಗ ವಯೋವೃದ್ಧರಾಗಿರುವ ಚೌಹಾಣ್ ಬಳಿ ಸಿನಿಮಾ ನಿರ್ಮಾಣಕ್ಕೂ ಪೂರ್ವದಲ್ಲಿ ಬಂದು ಎನ್ ಕೌಂಟರ್ ಮಾಹಿತಿ ಪಡೆಯುತ್ತಾರೆ. ಚೌಹಾಣ್ ಎಲ್ಲ ಮಾಹಿತಿ ನೀಡುತ್ತಾರೆ. ಆದರೆ ಸಿನಿಮಾದಲ್ಲಿ ತೋಮರನ ಜಾತಿಪೀಡಿತ ಮನಸ್ಥಿತಿಯ ಸುಳಿವೇ ಇಲ್ಲ. ಹಾಗೆ ಮಾಡಿದ್ದರೆ ಸಿನಿಮಾ ಓಡಬೇಕಲ್ಲವೇ? ಚೌಹಾಣ್ ಸಿನಿಮಾ ನೋಡಲಿಲ್ಲವಂತೆ, ನೋಡುವ ಆಸಕ್ತಿ ನನಗಿಲ್ಲ, ಯಾಕೆಂದರೆ ಆ ಡಕಾಯಿತನನ್ನು ಹೀರೋ‌ ಮಾಡಿರುತ್ತಾರೆ. ಅವನು ಸೈನಿಕನಾಗಿರಬಹುದು, ಅಥ್ಲೀಟ್ ಆಗಿರಬಹುದು. ನನ್ನ ಕಣ್ಣಲ್ಲಿ ಅವನೊಬ್ಬ ಕೊಲೆಗಡುಕ ಅಷ್ಟೆ. ಒಬ್ಬ ಕೊಲೆಗಡುಕನ ಅಂತ್ಯ ಹೇಗೆ ಆಗಬೇಕೋ ಹಾಗೇ ಆಗಿದೆ ಎಂದು ಓಪನ್ ಮ್ಯಾಗಜೀನ್ ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು ಚೌಹಾಣ್.

ರತಿಯಂಕಪುರದಲ್ಲಿ ಎನ್ ಕೌಂಟರ್ ನಡೆದಿದ್ದು 1981ರಲ್ಲಿ. ನಲವತ್ತು ವರ್ಷಗಳು ಕಳೆದುಹೋಗಿವೆ. ಆದರೆ ಸುತ್ತಮುತ್ತಲ ಗ್ರಾಮಸ್ಥರ ಕಣ್ಣಲ್ಲಿ ಇಡೀ ರತಿಯಂಕಪುರ ಗದ್ದಾರ್ (ದ್ರೋಹಿ) ಗಳ ಊರು. ಯಾಕೆಂದರೆ ಅವರು ರಜಪೂತರ ಹೆಮ್ಮೆಯಾಗಿದ್ದ ಪಾನ್ ಸಿಂಗ್ ತೋಮರ್ ನನ್ನು ಹಿಡಿದುಕೊಟ್ಟವರು!

ಇದೆಲ್ಲ ಯಾಕೆ ಹೇಳಿದೆನೆಂದರೆ ಜಾತಿಹೆಮ್ಮೆಯ ಸಂದೀಪ್ ಠಾಕೂರ್, ರವಿ ಠಾಕೂರ್,‌ ರಾಮುಠಾಕೂರ್ ಮತ್ತು ಲವಕುಶ್ ಠಾಕೂರ್ ಮನೀಷಾಳನ್ನು ಅತ್ಯಾಚಾರ ಮಾಡಿ ಕೊಂದಿದ್ದಾರಲ್ಲವೇ? ಹೆಮ್ಮೆಯ ರಜಪೂತ್ ಠಾಕೂರ್ ಆದಿತ್ಯನಾಥ ಸರ್ಕಾರ ಎಂದಿನಂತೆ ಈ ನಾಲ್ವರನ್ನು ಫೇಕ್ ಎನ್ ಕೌಂಟರ್ ನಲ್ಲಿ ಸಾಯಿಸಲು ಸಾಧ್ಯವೇ? ಛಾನ್ಸೇ ಇಲ್ಲ. ಶಿಕ್ಷಿಸುವ ಮನಸಿದ್ದರೆ ಆಕೆಯ ಹೆಣವನ್ನು ಹಾಗೆ ನಡುರಾತ್ರಿ ಸುಟ್ಟು ಹಾಕುತ್ತಿದ್ದರೇ ಪೊಲೀಸರು? ಪ್ರತಾಪ್ ಸಿಂಗ್ ಚೌಹಾಣ್ ರಂಥವರು ಇನ್ನೂ ಯುಪಿ ಪೊಲೀಸ್ ಪಡೆಯಲ್ಲಿ ಉಳಿದಿರಲು ಸಾಧ್ಯವೇ?

ಕ್ರೋನಾಲಜಿ ಅರ್ಥವಾಯಿತಾ?

  • ದಿನೇಶ್ ಕುಮಾರ್ ಎಸ್.ಸಿ.

Leave a Reply

Your email address will not be published. Required fields are marked *