ವಿದ್ಯಾಗಮ ಶಿಕ್ಷಣ ಹೆಸರಿನಲ್ಲಿ ಶಿಕ್ಷಕರು – ವಿದ್ಯಾರ್ಥಿಗಳನ್ನು ಸಾವಿನ ಕಂದಕಕ್ಕೆ ನೂಕುತ್ತಿರುವ ರಾಜ್ಯ ಸರ್ಕಾರ!: ಕುಮಾರಸ್ವಾಮಿ ಪ್ರಶ್ನೆ
ನ್ಯೂಸ್ ಕನ್ನಡ ವರದಿ: ಕೊರೋನಾ ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ‘ವಿದ್ಯಾಗಮ’ ಶಿಕ್ಷಣದ ಹೆಸರಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಾವಿನ ಕಂದಕಕ್ಕೆ ನೂಕುತ್ತಿರುವ ರಾಜ್ಯ ಸರ್ಕಾರಕ್ಕೆ ಮನುಷ್ಯತ್ವ ಇದೆಯಾ? ಸರ್ಕಾರಕ್ಕೆ ಕನಿಷ್ಠ ಪರಿಜ್ಞಾನ ಬೇಡವೇ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗುಡುಗಿದ್ದಾರೆ.
ಮಕ್ಕಳು ಮತ್ತು ಶಿಕ್ಷಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯಸರ್ಕಾರ ಸೋಮವಾರದೊಳಗೆ ವಿದ್ಯಾಗಮನ ಶಿಕ್ಷಣದ ಯಡವಟ್ಟನ್ನು ನಿಲ್ಲಿಸದಿದ್ದರೆ ವಿಧಾನಸೌಧ ಇಲ್ಲವೇ ಸ್ವಾತಂತ್ರ್ಯ ಉದ್ಯಾನದ ಬಳಿ ಅಹೋರಾತ್ರಿ ಧರಣಿ ಕೂರುವುದಾಗಿ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ.
ವೇತನ ಹಾಗೂ ಸೌಲಭ್ಯಗಳ ಕಡಿತದ ಬೆದರಿಕೆ ಒಡ್ಡಿ ಸಾವಿನ ದವಡೆಗೆ ನೂಕಿದ ಶಿಕ್ಷಕರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಆ ಕುಟುಂಬದ ಅರ್ಹ ಸದಸ್ಯರಿಗೆ ಉದ್ಯೋಗ ನೀಡಬೇಕು.
ಮಕ್ಕಳಿಗೆ ಶಿಕ್ಷಣಕೊಡುವ ಸೋಗಿನಲ್ಲಿ ಶಿಕ್ಷಣ ಸಚಿವರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆಗಳನ್ನು ನೀಡುತ್ತಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತರುತ್ತಿರುವುದು ಖಂಡನೀಯ ಹಾಗೂ ಅಮಾನವೀಯ.
ಈ ವರ್ಷ ಶಾಲೆ ಆರಂಭಿಸದಿದ್ದರೆ ದೇಶ ಮುಳುಗಿ ಹೋದೀತೆ? ಇಂತಹದೊಂದು ಹುಚ್ಚಾಟ ಸರ್ಕಾರಕ್ಕೆ ಬೇಕೆ? ಇದೊಂದು ನಾಗರಿಕ ಸರ್ಕಾರವೇ?
ಕೊರೋನಾ ನಿಯಂತ್ರಿಸುವಲ್ಲಿ ವಿಫಲವಾಗಿರುವ ಸರ್ಕಾರ ಕನಿಷ್ಠ ಆಕ್ಸಿಜನ್ ಒದಗಿಸಲು ಪರದಾಡುತ್ತಿದೆ.
ಜನಪ್ರತಿನಿಧಿ ಇರಲಿ, ಸಾಮಾನ್ಯ ಪ್ರಜೆ ಇರಲಿ , ಜೀವ ರಕ್ಷಣೆ ಮಾಡಬೇಕಾದ್ದು ಸರ್ಕಾರದ ಮೊದಲ ಆದ್ಯತೆ ಮತ್ತು ಕರ್ತವ್ಯ. ಜೀವ ಉಳಿದರೆ ತಾನೇ ಬದುಕು?
ನನ್ನ ಜೀವ ಹೋದರೂ ಪರವಾಗಿಲ್ಲ. ಮಂಗಳವಾರದಿಂದ ಸರ್ಕಾರದ ಅನಾಗರಿಕ, ನಿರ್ಲಜ್ಜ ನೀತಿ, ನಿರ್ಧಾರದ ವಿರುದ್ಧ ಅಹೋರಾತ್ರಿ ಧರಣಿ ಆರಂಭಿಸುತ್ತೇನೆ.