ಸಿರಾಜ್ -ಬೂಮ್ರಾ ವಿರುದ್ಧ ಜನಾಂಗೀಯ ನಿಂದನೆ ಮಾಡಿ ಕ್ಷಮೆ ಕೋರಿದ ಆಸ್ಟ್ರೇಲಿಯಾ !

ಸಿಡ್ನಿ: ಜನಾಂಗೀಯ ನಿಂದನೆ ಮಾಡುವ ಆಸ್ಟ್ರೇಲಿಯಾ ಕ್ರಿಕೆಟ್ ಅಭಿಮಾನಿಗಳ ವಿಕೃತಿ ನೆಲ್ಲೂಅವಂತೆ ಕಾಣುತ್ತಿಲ್ಲ. ಇದೀಗ ಮತ್ತೆ ಟೀಂ ಇಂಡಿಯಾ ಆಟಗಾರರ ವಿರುದ್ಧದ ಜನಾಂಗೀಯ ನಿಂದನೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಎಚ್ಚೆತ್ತುಕೊಂಡ ಕ್ರಿಕೆಟ್‌ ಆಸ್ಟ್ರೇಲಿಯಾ(ಸಿಎ) ಭಾರತ ತಂಡದ ಕ್ಷಮೆಯಾಚಿಸಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಶನಿವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದ ವೇಳೆ ಟೀಮ್ ಇಂಡಿಯಾ ಆಟಗಾರರಾದ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಅವರಿಗೆ ಕುಡಿದ ಮತ್ತಿನಲ್ಲಿದ್ದ ಪ್ರೇಕ್ಷಕನೊಬ್ಬ ಜನಾಂಗೀಯ ನಿಂದನೆ ಮಾಡಿದ್ದನು. ಈ ಪ್ರಕರಣ ಸಂಬಂಧ ಐಸಿಸಿ ಮ್ಯಾಚ್ ರೆಫರಿ ಡೇವಿಡ್ ಬೂನ್ ಅವರಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ದೂರು ನೀಡಿತ್ತು.

ಇದೀಗ ಘಟನೆ ಸಂಬಂಧ ಕ್ರಿಕೆಟ್‌ ಆಸ್ಟ್ರೇಲಿಯಾ ಪ್ರತಿಕ್ರಿಯಿಸಿದೆ. ಎಲ್ಲಾ ತಾರತಮ್ಯದ ನಡವಳಿಕೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಬಲ ಪದಗಳಲ್ಲಿ ಖಂಡಿಸುತ್ತದೆ. ನೀವು ವರ್ಣಭೇದ ನೀತಿಯಲ್ಲಿ ತೊಡಗಿದರೆ, ಆಸ್ಟ್ರೇಲಿಯಾದ ಕ್ರಿಕೆಟ್‌ನಲ್ಲಿ ನಿಮಗೆ ಸ್ವಾಗತವಿಲ್ಲ ಎಂದೂ ಸಿಎ ಪ್ರೇಕ್ಷಕರಿಗೆ ಎಚ್ಚರಿಕೆ ನೀಡಿದೆ.

ಅಂತೆಯೇ ಎಸ್‌ಸಿಜಿಯಲ್ಲಿ ಶನಿವಾರ ವರದಿಯಾಗಿರುವ ಈ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ತನಿಖೆಯ ವರದಿಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಕಾಯುತ್ತಿದೆ. ಅಂತೆಯೇ ಸಿಎ. ಕಿರುಕುಳ ವಿರೋಧಿ ಸಂಹಿತೆಯ ಅಡಿಯಲ್ಲಿ ಸಾಧ್ಯವಾದಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದೆ. ಅಲ್ಲದೆ ಪ್ರವಾಸಿ ಭಾರತ ತಂಡಕ್ಕೆ ಅನಾನುಕೂಲಕ್ಕೆ ಕ್ಷಮೆಯಾಚಿಸುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳ ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದೆ.

‘ಕೋತಿ’ ಎಂದಿದ್ದ ಕಿಡಿಗೇಡಿಗಳು
ಬಿಸಿಸಿಐ ಮೂಲಗಳ ಪ್ರಕಾರ, ಸಿಡ್ನಿ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕನೊಬ್ಬ ಮೊಹಮ್ಮದ್ ಸಿರಾಜ್ ಅವರನ್ನು ‘ಕೋತಿ’ ಎಂದು ನಿಂದಿಸಿದ್ದ. ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಅವರಿಗೆ ಪ್ರೇಕ್ಷಕನಿಂದ ಜನಾಂಗೀಯ ನಿಂದನೆ ಘಟನೆ ಕುರಿತಂತೆ, ದಿನದ ಆಟದ ಕೊನೆಯಲ್ಲಿ ನಾಯಕ ಅಜಿಂಕ್ಯ ರಹಾನೆ ಸೇರಿದಂತೆ ತಂಡದ ಸದಸ್ಯರು ಅಂಪೈರ್‌ಗಳು ಮತ್ತು ಭದ್ರತಾ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದ್ದರು. ಭಾರತದ ಈ ಇಬ್ಬರು ಆಟಗಾರರು ಫೀಲ್ಡಿಂಗ್ ಮಾಡುತ್ತಿದ್ದ ಸಂದರ್ಭ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ವ್ಯಕ್ತಿ ನಿಂದನೆ ಮಾಡಿದ್ದಾನೆ.

ಈ ಘಟನೆ 2007–08ರಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭ ನಡೆದಿದ್ದ ಮಂಕಿಗೇಟ್ ಎಪಿಸೋಡ್ ಅನ್ನು ಮತ್ತೆ ನೆನಪಿಸಿದೆ.

Leave a Reply

Your email address will not be published. Required fields are marked *