ಶಿವಮೊಗ್ಗ ಹುಣಸೋಡು ಸ್ಫೋಟ ಪ್ರಕರಣ; ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಯಡಿಯೂರಪ್ಪ
ಬೆಂಗಳೂರು: ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದಲ್ಲಿ ನಿನ್ನೆ ರಾತ್ರಿ ಭಾರೀ ಜಿಲೆಟಿನ್ ಸ್ಫೋಟವಾಗಿದ್ದು, ಈ ಅವಘಡದಲ್ಲಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಭೂಮಿ ಕಂಪಿಸುವ ಮತ್ತು ಶಬ್ದ ಕೇಳುವ ಮಟ್ಟಕ್ಕೆ ಸ್ಫೋಟದ ತೀವ್ರತೆ ಇತ್ತು. ಜನರು ಭೂ ಕಂಪವಾಯಿತೆಂದು ಮನೆಯಿಂದ ಹೊರಗೋಡಿದ ಘಟನೆಗಳೂ ಹಲವೆಡೆ ವರದಿಯಾಗಿವೆ. ಸ್ಫೋಟಗೊಂಡ ಜಿಲೆಟಿನ್ಗಳನ್ನ ಹೊತ್ತು ಸಾಗುತ್ತಿದ್ದ ಲಾರಿ ಸಂಪೂರ್ಣ ನಾಶವಾಗಿದೆ. ಕೆಲವರ ಪ್ರಕಾರ, ಲಾರಿಯಲ್ಲಿದ್ದ 50 ಬಾಕ್ಸ್ಗಳ ಡೈನಮೈಟ್ಗಳು ಒಂದಾದ ಒಂದರಂತೆ ಸ್ಫೋಟಗೊಂಡಿವೆ ಎನ್ನಲಾಗಿವೆ.
ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ, ಇನ್ನಷ್ಟು ಜಿಲೆಟಿನ್ ಕಡ್ಡಿಗಳು ಸ್ಫೋಟಗೊಳ್ಳುವ ಅಪಾಯ ಇದ್ದರಿಂದ ಬಹಳ ಎಚ್ಚರಿಕೆಯಿಂದ ಅಪಘಾತದ ಸ್ಥಳಕ್ಕೆ ಹೋಗಲಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಒಂದು ವರದಿ ಪ್ರಕಾರ ಕಲ್ಲು ಕ್ವಾರಿಯಲ್ಲಿ ಬಿಹಾರ ಮೂಲದ 15ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಅವರಲ್ಲಿ ಯಾರೂ ಬದುಕಿರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಸ್ಫೋಟಗೊಂಡ ರಭಸಕ್ಕೆ ದೇಹಗಳು ಗುರುತು ಸಿಗಲಾರದಷ್ಟು ಛಿದ್ರಗೊಂಡಿವೆ ಎನ್ನಲಾಗುತ್ತಿದೆ.
ಜಿಲೆಟಿನ್ ಕಡ್ಡಿಗಳ ಸ್ಫೋಟಕ್ಕೆ ಇನ್ನೂ ನಿಖರ ಕಾರಣ ಗೊತ್ತಾಗಿಲ್ಲ. ಲಘು ಭೂಕಂಪನದಿಂದ ಜಿಲೆಟಿನ್ ಕಡ್ಡಿಗಳ ಘರ್ಷಣೆಯಾಗಿ ಅದರಿಂದ ಡೈನಾಮೈಟ್ ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಆದರೆ ಭೂಕಂಪನ ಸಂಭವಿಸಿರುವುದು ಎಲ್ಲಿಯೂ ದಾಖಲಾಗಿಲ್ಲ. ಭೂಕಂಪ ಮಾಪನ ಕೇಂದ್ರಗಳಲ್ಲಿ ಕಂಪನ ದಾಖಲಾಗಿಲ್ಲ.
ಈ ಕುರಿತು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, “ಶಿವಮೊಗ್ಗದ ಹುಣಸೋಡು ಬಳಿ ನಿನ್ನೆ ರಾತ್ರಿ ಸಂಭವಿಸಿದ ಭಾರೀ ಅನಾಹುತದಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದ ಸುದ್ದಿ ತೀವ್ರ ಆಘಾತಕಾರಿ ಹಾಗೂ ದುರದೃಷ್ಟಕರ. ಹಿರಿಯ ಅಧಿಕಾರಿಗಳೊಂದಿಗೆ ನಿನ್ನೆ ತಡರಾತ್ರಿಯಿಂದಲೇ ಸಂಪರ್ಕದಲ್ಲಿದ್ದು, ಅಗತ್ಯ ರಕ್ಷಣಾ ಕಾರ್ಯಾಚರಣೆಗೆ ತಂಡಗಳನ್ನು ಈಗಾಗಲೇ ರವಾನಿಸಲಾಗಿದೆ.
ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಕುಟುಂಬದವರಲ್ಲಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರೆಲ್ಲರೂ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ದುರ್ಘಟನೆಯ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ” ಎಂದು ಭರವಸೆ ನೀಡಿದ್ದಾರೆ.