ಬಿಜೆಪಿಯೊಳಗೆ ಭುಗಿಲೆದ್ದ ಅಸಮಾಧಾನ; ಖಾತೆ ಮರುಹಂಚಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸುಧಾಕರ್

ಬೆಂಗಳೂರು: ಸಚಿವರ ಖಾತೆ ಮರುಹಂಚಿಕೆಯಿಂದ ಬಿಜೆಪಿಯೊಳಗೆ ಭುಗಿಲೆದ್ದಿರುವ ಅಸಮಾಧಾನ ತಣ್ಣಗಾಗುವಂತೆ ಕಾಣುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡಿರುವ ಸಚಿವರ ಪೈಕಿ ಇದೀಗ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅಸಮಾಧಾನ ಹೊರಹಾಕಿದ್ದಾರೆ.

ತನ್ನ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಹಿಂಪಡೆದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಬಿಜೆಪಿ ರಾಜಕೀಯವಾಗಿ ಆತ್ಮಹತ್ಯೆಗೆ ಮುಂದಾಗಿದೆ ಎಂದು ಗುಡುಗಿದ್ದಾರೆ. ಮಾಧ್ಯಮಗಳೊಂದಿಗೆ ಇಂದು ಮಾತನಾಡುತ್ತಿದ್ದ ಡಾ. ಕೆ ಸುಧಾಕರ್, ತಾನು ಬಿಜೆಪಿಗೆ ಬರುವಾಗ ನೀಡಲಾಗಿದ್ದ ಮಾತನ್ನು ಉಳಿಸಿಕೊಳ್ಳಲಾಗಿಲ್ಲ ಎಂದೂ ಅವರು ವಿಷಾದ ವ್ಯಕ್ತಪಡಿಸಿದ್ಧಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿಗೆ ಮೂರು ಪರ್ಸೆಂಟ್ ವೋಟು ಬಂದಿರಲಿಲ್ಲ. ನಾನು ಬಿಜೆಪಿ ಸೇರಿ 85 ಸಾವಿರ ಮತ ಪಡೆದೆ. ಐದು ಸಾವಿರ ಮತದಿಂದ 85 ಸಾವಿರ ಮತ ಪಡೆಯುವುದು ಸಾಮಾನ್ಯ ವಿಷಯ ಅಲ್ಲ. ಎಂಥ ಪರಿಸ್ಥಿತಿಯಲ್ಲಿ ನಾನು ರಿಸ್ಕ್ ತೆಗೆದುಕೊಂಡು ಬಿಜೆಪಿಗೆ ಬಂದಿದ್ದೆ ಎಂಬುದು ಗೊತ್ತಿದೆ. ಪಕ್ಷಕ್ಕೆ ಒಳ್ಳೆಯ ಹೆಸರು ತರಲು ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡಿದ್ದೇನೆ ಎಂದು ಆರೋಗ್ಯ ಸಚಿವರು ಹೇಳಿಕೊಂಡಿದ್ದಾರೆ.

ನಾನು ಬಿಜೆಪಿಗೆ ಬರುವಾಗ ಏನೇನು ಮಾತುಕತೆ ಆಗಿತ್ತು ಅಂತ ನನಗೆ ಗೊತ್ತು. ವಿವಿಧ ಘಟನಾವಳಿಗಳ ಮೂಲಕ ಈ ಸರ್ಕಾರ ಬಂದಿದೆ. ಈ ವೇಳೆ ನಡೆದ ಮಾತುಕತೆ ಪ್ರಕಾರ ಈಗ ನಡೆದುಕೊಳ್ಳಬೇಕು. ನನಗೆ ಪಕ್ಷದ ಶಿಸ್ತು ಮುಖ್ಯ. ಸಿಎಂ ಏನು ಮಾಡಬೇಕಿತ್ತು ಅಂತ ನಾನು ಹೇಳಲು ಆಗುವುದಿಲ್ಲ. ಸಿಎಂ ಭೇಟಿಯಾಗಿ ನಾನು ಮಾತನಾಡುತ್ತೇನೆ. ಆದರೆ, ಅಶೋಕ್ ಜೊತೆ ನಾನಿನ್ನೂ ಮಾತನಾಡಿಲ್ಲ. ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿದ್ದೇನೆ ಅಷ್ಟೇ. ನನ್ನ ಜೊತೆ ರಮೇಶ್ ಜಾರಕಿಹೊಳಿ ಕೂಡ ಮಾತನಾಡಿದ್ದಾರೆ ಎಂದವರು ತಿಳಿಸಿದ್ದಾರೆ.

ಎಂಟಿಬಿ ನಾಗರಾಜ್ ಅವರಿಗೆ ಅನ್ಯಾಯ ಆಗಿದೆ. ವಸತಿ ಸಚಿವ ಸ್ಥಾನವನ್ನು ಅವರು ಬಿಟ್ಟು ಬಂದಿದ್ದರು. ಈಗ ಎಂಟಿಬಿ ನಾಗರಾಜ್ ಅವರ ರಕ್ಷಣೆ ನಮ್ಮ ಕರ್ತವ್ಯವಾಗಿದೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಡಾ. ಸುಧಾಕರ್ ಸ್ಪಷ್ಟಪಡಿಸಿದ್ಧಾರೆ.

ತಮ್ಮ ಖಾತೆ ಬದಲಾವಣೆ ಬಗ್ಗೆ ಮಾತನಾಡಿದ ಅವರು, ತಾನು ಯಾವುದೇ ಇಲಾಖೆಗೆ ಕಚ್ಚಿಕೊಂಡು ಕೂರುವುದಿಲ್ಲ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಎರಡೂ ಖಾತೆ ಒಬ್ಬರ ಬಳಿ ಇದ್ದರೆ ಒಳ್ಳೆಯದು ಎಂಬ ಕಾರಣಕ್ಕೆ ನನಗೆ ಕೊಡಲಾಗಿತ್ತು. ಈಗ ಅದನ್ನು ಯಾರಿಗೇ ಕೊಟ್ಟರೂ ಒಬ್ಬರ ಬಳಿಯೇ ಆ ಎರಡು ಖಾತೆಗಳು ಇರಬೇಕು. ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಎರಡೂ ಇಲಾಖೆ ಮಧ್ಯೆ ಸಮನ್ವಯತೆ ಇರುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *