ಟ್ರಾಕ್ಟರ್ ರಾಲಿ ನಿಲ್ಲಿಸಲು ಪ್ರತಿಭಟನಾನಿರತ ರೈತ ಮುಖಂಡರಲ್ಲಿ ನಾಲ್ವರನ್ನು ಹತ್ಯೆಗೆ ಪಿತೂರಿ: ರೈತರು ಆರೋಪ
ನವದೆಹಲಿ: ಜನವರಿ 26ರಂದು ಗಣರಾಜ್ಯೋತ್ಸವ ದಿನ ರೈತರು ನಡೆಸಲು ಉದ್ದೇಶಿಸಿರುವ ಟ್ರಾಕ್ಟರ್ ರಾಲಿಯನ್ನು ನಿಲ್ಲಿಸಲು ಪ್ರತಿಭಟನಾ ನಿರತ ರೈತ ಮುಖಂಡರಲ್ಲಿ ನಾಲ್ವರನ್ನು ಹತ್ಯೆ ಮಾಡಲು ಪಿತೂರಿ ನಡೆಸಲಾಗಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ದೆಹಲಿಯ ಸಿಂಘು ಗಡಿಭಾಗದಲ್ಲಿ ನಿನ್ನೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡರು, ಒಬ್ಬ ವ್ಯಕ್ತಿಯನ್ನು ಟ್ರಾಕ್ಟರ್ ರ್ಯಾಲಿ ಸಂದರ್ಭದಲ್ಲಿ ಪೊಲೀಸ್ ರಂತೆ ವೇಷ ಧರಿಸಿ ರೈತರ ಗುಂಪಿನ ಮೇಲೆ ಹಲ್ಲೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ಈಗ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ವಿಫಲಗೊಳಿಸುವ ಯತ್ನ ನಡೆಯುತ್ತಿದೆ ಎಂದು ರೈತ ನಾಯಕ ಕುಲ್ವಂತ್ ಸಿಂಗ್ ಸಂಧು ಆರೋಪಿಸಿದ್ದಾರೆ.
ಈ ಮಧ್ಯೆ, ರೈತ ಮುಖಂಡರು ಮತ್ತು ಪೊಲೀಸರ ಮಧ್ಯೆ ಟ್ರಾಕ್ಟರ್ ರ್ಯಾಲಿ ಬಗ್ಗೆ ನಿನ್ನೆ ಮಾತುಕತೆ ನಡೆದು ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ. ಎರಡೂ ಕಡೆಯವರು ತಮ್ಮ ನಿಲುವಿಗೆ ಬದ್ಧವಾಗಿದ್ದು, ರ್ಯಾಲಿ ವೇಳೆ ಶಾಂತಿ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದು ಹಠಕ್ಕೆ ಬಿದ್ದಿವೆ.
ನಿನ್ನೆಯ ಸಭೆಯಲ್ಲಿ ಪೊಲೀಸರು, ಟ್ರಾಕ್ಟರ್ ರ್ಯಾಲಿಯನ್ನು ದೆಹಲಿಯ ಹೊರಭಾಗದಲ್ಲಿ ನಡೆಸಿ ಎಂದು ಮನವಿ ಮಾಡಿದ್ದರು ಎಂದು ತಿಳಿದುಬಂದಿದೆ. ತಾವು ದೆಹಲಿಯ ಔಟರ್ ರಿಂಗ್ ರೋಡ್ ನಲ್ಲಿ ರ್ಯಾಲಿಯನ್ನು ನಡೆಸಲು ತೀರ್ಮಾನಿಸಿದ್ದೇವೆ ಎಂದು ರೈತರು ಹೇಳಿದ್ದಾರೆ.