ಐಪಿಎಲ್ 2018: ರಾಜಸ್ತಾನ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ಗೆ ಭರ್ಜರಿ ಜಯ!
ನ್ಯೂಸ್ ಕನ್ನಡ ವರದಿ-(08.04.18): ದೇಶದಾದ್ಯಂತ ಇಂಡಿಯನ್ ಪ್ರೀಮಿಯರ್ ಲೀಗ್ ಹವಾ ಪ್ರಾರಂಭಗೊಂಡಿದೆ. ನಿನ್ನೆ ತಾನೇ ಐಪಿಎಲ್ ಅಧಿಕೃತವಾಗಿ ಉದ್ಘಾಟನೆಗೊಂಡಿತ್ತು. ಪ್ರಥಮ ಪಂದ್ಯದಲ್ಲಿ ಮುಖಾಮುಖಿಯಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯಾಟವು ವೀಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವಲ್ಲಿ ಸಫಲವಾಗಿತ್ತು. ಇದೀಗ ಇಂದು ರಾಜಸ್ತಾನ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಹೈದರಾಬಾದ್ ತಂಡವು ಸುಲಭ ಜಯಗಳಿಸಿದೆ.
ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ ರಾಯಲ್ಸ್ ತಂಡವು ಆರಂಭಿಕ ಹಂತದಲ್ಲಿ ಕೊಂಚ ಮಟ್ಟಿಗೆ ಉತ್ತಮವಾಗಿ ಆಡಿದರೂ ಬಳಿಕ ತೋರಿದ ನೀರಸ ಪ್ರದರ್ಶನದಿಂದಾಗಿ ವಿಕೆಟ್ ಕಳೆದುಕೊಳ್ಳಲು ಆರಂಭಿಸಿತು. ರಾಜಸ್ತಾನ ರಾಯಲ್ಸ್ ಪರ ಕೇರಳದ ಆಟಗಾರ ಸಂಜು ಸ್ಯಾಮ್ಸನ್(49) ಹೊರತುಪಡಿಸಿ ಇನ್ಯಾರೂ ಗಮನಾರ್ಹ ಪ್ರದರ್ಶನ ತೋರಲಿಲ್ಲ. ಬೌಲಿಂಗ್ ನಲ್ಲಿ ರಶೀದ್ ಖಾನ್, ಶಕೀಬ್ ಉಲ್ ಹಸನ್ ಮತ್ತು ಸಿದ್ಧಾರ್ಥ್ ಕೌಲ್ ಮಿಂಚಿದರು.
ಬಳಿಕ ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡವು ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ, ಶಿಖರ್ ಧವನ್ ಮತ್ತು ಕೇನ್ ವಿಲಿಯಮ್ಸನ್ ಭರ್ಜರಿ ಪ್ರದರ್ಶನ ತೋರಿದರು. ಶಿಖರ್ ಧವನ್ 57 ಎಸೆತಗಳಲ್ಲಿ 77 ರನ್ ದಾಖಲಿಸಿದರೆ ಕೇನ್ ವಿಲಿಯಮ್ಸನ್ 35ಎಸೆತಗಳಲ್ಲಿ 36 ರನ್ ದಾಖಲಿಸಿದರು. ಕೊನೆಗೆ ಕೇವಲ 15.5 ಓವರ್ ಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ನಿಗದಿತ ಗುರಿಯನ್ನು ಮುಟ್ಟಿತು.