ನನ್ನ ಮಗ ಭಯೋತ್ಪಾದಕನೆಂದು ದೃಢಪಟ್ಟರೆ ಆತನ ಶವವನ್ನೂ ಸ್ವೀಕರಿಸಲಾರೆ: ಶಂಕಿತ ಭಯೋತ್ಪಾದಕನ ತಾಯಿಯ ಮಾತು

ನ್ಯೂಸ್ ಕನ್ನಡ ವರದಿ(11-04-2018): ತನ್ನ ಮಗ ಭಯೋತ್ಪಾದಕನೆಂದು ದೃಢ ಪಟ್ಟರೆ ಆತ ಸತ್ತ ನಂತರ ಆತನ ಶವವನ್ನೂ ನಾನು ಸ್ವೀಕರಿಸಲಾರೆ. ನನ್ನ ದೇಶಕ್ಕೆ ದ್ರೋಹ ಮಾಡುವವನು ನನ್ನ ಮಗನಲ್ಲ ಎಂದು ತಾಯಿಯೊಬ್ಬಳು ತನ್ನ ಭಯೋತ್ಪಾದಕ ಮಗನ ಕುರಿತು ಹೇಳಿದ ಘಟನೆಯು ಅಸ್ಸಾಂನ ನಗಾನಾದದಿಂದ ವರದಿಯಾಗಿದೆ.

ಅಸ್ಸಾಂನ ನಗೌನಾ ನಗರದ ನಿವಾಸಿಯಾದ ತಾಹಿರಾ ಬೇಗಮ್ ಎಂಬವರ ಪುತ್ರ ಖಮರುಲ್ ಝಮಾನ್ ಎಂಬುವವನು ಹಿಝ್ಬುಲ್ ಮುಜಾಹಿದೀನ್ ಸಂಘಟನೆಗೆ ಸೇರಿದ್ದಾನೆ ಎಂಬ ಸುದ್ದಿ ಸಾಮಾಜಿಕ ತಾಣಗಳಲ್ಲಿ ವೈರಲಾಗಿತ್ತು. ಸುದ್ದಿಯ ಜೊತೆಗೆ ತನ್ನ ಮಗ ರೈಫಲ್ ಹಿಡಿದು ನಿಂತಿದ್ದ ಫೋಟೋ ನೋಡಿದ ತಾಯಿ ತಾಹಿರಾ ಬೇಗಮ್ ಅಘಾತಕ್ಕೊಳಗಾಗಿದ್ದಾರೆ.

ಈ ಸುದ್ಧಿ ದೃಢವಾಗುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ತಾಹಿರಾ ಬಾನು “ನನಗೆ ಮಗನಿಗಿಂತಲೂ ನನ್ನ ದೇಶವೇ ಮುಖ್ಯ. ನನ್ನ ಮಗ ಖಮರುಲ್ ಝಮಾನ್ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕರ ಜೊತೆ ಸೇರಿದ್ದು ನಿಜವಾದಲ್ಲಿ ಸರಕಾರ ಆತನ ವಿರುದ್ಧ ಕ್ರಮ ಕೈಗೊಳ್ಳಲಿ, ನಾನು ಅವನ ಹೆಣ ಕೂಡ ಸ್ವೀಕರಿಸಲಾರೆ. ನನಗೆ ಮಗನಿಗಿಂತ ನನ್ನ ತಾಯ್ನಾಡೇ ಮುಖ್ಯ” ಎಂದಿದ್ದಾರೆ.

ತಾಹಿರಾ ಬೇಗಂ ಅವರ ಮಗ ಅಮೇರಿಕಾದಲ್ಲಿ ಉದ್ಯೋಗ ಮಾಡುತ್ತಿದ್ದಾತ, ಕಳೆದ ಕೆಲವು ಸಮಯದಿಂದ ಕಾಶ್ಮೀರಕ್ಕೆ ವಲಸೆ ಬಂದಿದ್ದ ಎನ್ನಲಾಗಿದೆ. ನಂತರ ಊರಿನಿಂದ ಕಾಣೆಯಾದ ಆತ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗೆ ಸೇರಿದ್ದಾನೆಂದು ವರದಿಯಾಗಿತ್ತು.

Leave a Reply

Your email address will not be published. Required fields are marked *