ನೇರ ಪ್ರಸಾರದಲ್ಲಿದ್ದ ಟಿವಿ ಪತ್ರಕರ್ತನ್ನೊಬ್ಬನನ್ನು ಗನ್ ತೋರಿಸಿ ದರೋಡೆಗೈದ ಕಳ್ಳ; ವೀಡಿಯೊ ವೈರಲ್

ಈಗೆಲ್ಲ ದರೋಡೆ ಎಂಬುವುದು ಹಾಡುಹಗಲೇ ನಡೆಯುತ್ತೆ…ಅದಕ್ಕೆ ಸಾಕ್ಷಿ ಎಂಬಂತಿದೆ ಈ ಘಟನೆಯ ವೀಡಿಯೊ….ಅದರಲ್ಲೂ ನೇರ ಪ್ರಸಾರದಲ್ಲಿದ್ದ ಟಿವಿ ಪತ್ರಕರ್ತನ್ನೊಬ್ಬನನ್ನು ಕಳ್ಳನೊಬ್ಬ ಗನ್ ತೋರಿಸಿ ದರೋಡೆ ಮಾಡಿದ್ದು ಈ ವೀಡಿಯೊ ಈಗ ವೈರಲ್ ಆಗಿದೆ.

ಕಳೆದ ಶುಕ್ರವಾರ ಟಿವಿ ವಾಹಿನಿಯ ಪತ್ರಕರ್ತರಿಬ್ಬರು ಲೈವ್ ರಿಪೋರ್ಟಿಂಗ್ ಮಾಡುತ್ತಿರುತ್ತಾರೆ. ಈ ವೇಳೆ ಇದ್ದಕ್ಕಿದ್ದಂತೆ ಗನ್ ಹಿಡಿದು ಎಂಟ್ರಿ ಕೊಟ್ಟ ಖದೀಮನೊಬ್ಬ ತನಗೆ ಹಣ ನೀಡುವಂತೆ ಬೆದರಿಸಿದ್ದಾನೆ. ತನಗೆ ಹಣ ನೀಡದಿದ್ದರೆ ಗುಂಡು ಹಾರಿಸಿ ಕೊಂದುಬೀಡುತ್ತೇನೆ ಎಂದು ವರದಿಗಾರ ಮತ್ತು ಕ್ಯಾಮರಾಮನ್ ಗೆ ಆತ ಹೆದರಿಸಿದ್ದಾನೆ. ಇಬ್ಬರಿಗೆ ಗನ್ ತೋರಿಸಿ ಬೆದರಿಸಿರುವ ಈ ಆಘಾತಕಾರಿ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿವೆ.

ಸ್ಕೈ ನ್ಯೂಸ್ ಪ್ರಕಾರ, ಈಕ್ವೆಡಾರ್ ನ ಡೈರೆಕ್‌ ಟಿವಿಯ ಕ್ರೀಡಾ ಪತ್ರಕರ್ತ ಡಿಯಾಗೋ ಒರ್ಡಿನೋಲಾ ಅವರು ಕಳೆದ ವಾರ ಗುವಾಕ್ವಿಲ್ ನಗರದ ಎಸ್ಟಾಡಿಯೋ ಸ್ಮಾರಕದ ಹೊರಗಿನಿಂದ ವರದಿ ಮಾಡುತ್ತಿದ್ದರು. ಲೈವ್ ವರದಿ ಮಾಡುತ್ತಿದ್ದ ವೇಳೆಯೇ ಎಂಟ್ರಿ ಕೊಟ್ಟ ದರೋಡೆಕೋರ ಅವರಿಗೆ ಗನ್ ತೋರಿಸಿ ಹಣ ನೀಡುವಂತೆ ಕೇಳಿದ್ದಾನೆ. ಕಳ್ಳ ಫೇಸ್ ಮಾಸ್ಕ್ ಧರಿಸಿ ಒರ್ಡಿನೋಲಾ ಅವರ ಹಣೆಗೆ ರಿವಾಲ್ವರ್ ತೋರಿಸಿ ಬೆದರಿಸಿದ್ದಾನೆ.

ಒರ್ಡಿನೋಲಾ ಮೈಕ್ರೊಫೋನ್‌ನಲ್ಲಿ ಸ್ವೈಪ್ ಮಾಡುವ ಮೊದಲು ಸಶಸ್ತ್ರ ದರೋಡೆಕೋರ ಮೊಬೈಲ್.. ಮೊಬೈಲ್… ಅಂತಾ ಕೂಗಿದ್ದಾನೆ. ನಂತರ ಆತ ತನ್ನ ಬಂದೂಕನ್ನು ಕ್ಯಾಮರಾಮ್ಯಾನ್ ಮತ್ತು ಸಿಬ್ಬಂದಿಗೆ ತೋರಿಸಿ ನಿಮ್ಮ ಬಳಿ ಇರುವ ಪರ್ಸ್ ಮತ್ತು ಮೊಬೈಲ್ ಫೋನ್ ಗಳನ್ನು ನೀಡುವಂತೆ ಹೆದರಿಸಿದ್ದಾನೆ. ಈ ಎಲ್ಲಾ ದೃಶ್ಯಗಳನ್ನು ಕ್ಯಾಮರಾಮನ್ ರೆಕಾರ್ಡ್ ಮಾಡಿ ಬಳಿಕ ಇನ್ಸ್ಟಾಗ್ರಾಮ್ ಗೆ ಅಪ್ಲೋಡ್ ಮಾಡಿದ್ದಾರೆ.

‘ನಾವು ಸುಮ್ಮನೇ ಕೆಲಸ ಮಾಡಲು ಸಾಧ್ಯವಿಲ್ಲ, ಈ ಘಟನೆ ಮಧ್ಯಾಹ್ನ 1 ಗಂಟೆಗೆ ಎಸ್ಟಾಡಿಯೋ ಸ್ಮಾರಕದ ಹೊರಗೆ ನಡೆದಿದೆ’ ಎಂದು ಒರ್ಡಿನೋಲಾ ಅವರು ನಡೆದಿರುವ ಆಘಾತಕಾರಿ ಘಟನೆಯ ಅನುಭವವನ್ನು ತಮ್ಮ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ನ್ಯೂಸ್ ವೀಕ್ ವರದಿಯ ಪ್ರಕಾರ, ಟಿವಿ ಸಿಬ್ಬಂದಿಯಿಂದ ಒಂದು ಮೊಬೈಲ್ ಪಡೆದು ದರೋಡೆಕೋರ ಎಸ್ಕೇಪ್ ಆಗಿದ್ದಾನೆ.

ಈ ಮಧ್ಯೆ, ಈ ಲೈವ್ ದರೋಡೆ ದೃಶ್ಯಗಳನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಹಾಡಹಗಲೇ ಹೀಗೆ ಗನ್ ಹಿಡಿದು ದರೋಡೆಗೆ ಯತ್ನಿಸಿರುವುದು ಆಘಾತಕಾರಿ ಮತ್ತು ಖಂಡನೀಯ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಕೆಲವರು ಟಿವಿ ಸಿಬ್ಬಂದಿಗೆ ಬೆದರಿಕೆ ಹಾಕಿ ಮೊಬೈಲ್ ಕಿತ್ತು ಪರಾರಿಯಾಗಿರುವ ಖದೀಮನನ್ನು ಪೊಲೀಸರು ಶೀಘ್ರವೇ ಪತ್ತೆ ಹಚ್ಚಬೇಕೆಂದು ಆಗ್ರಹಿಸಿದ್ದಾರೆ. ಕಳ್ಳನನ್ನು ಶೀಘ್ರವೇ ಪತ್ತೆ ಹಚ್ಚುತ್ತೇವೆಂದು ಪೊಲೀಸರು ಭರವಸೆ ನೀಡಿದ್ದಾರೆಂದು ಪತ್ರಕರ್ತ ಒರ್ಡಿನೋಲಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *