ನಟಿ ಕಂಗನಾ ರಣಾವತ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಜಾವೇದ್ ಅಖ್ತರ್; ವಿಚಾರಣೆಗೆ ಗೈರಾದ ಕಂಗನಾ ವಿರುದ್ಧ ವಾರೆಂಟ್

ಮುಂಬೈ: ಬಾಲಿವುಡ್ ಗೀತ ರಚನೆಕಾರ ಜಾವೇದ್‌ ಅಖ್ತರ್​ ವಿರುದ್ಧ ಟಿವಿ ಸಂದರ್ಶನದಲ್ಲಿ ನಟಿ ಕಂಗನಾ ರಣಾವತ್ ಆಧಾರ ರಹಿತವಾಗಿ ಟೀಕೆ ಮಾಡಿದ್ದರು. ಹೀಗಾಗಿ ಜಾವೇದ್​ ಅಖ್ತರ್​ ಸ್ಥಳೀಯ ನ್ಯಾಯಾಲಯದಲ್ಲಿ ಟಿವಿ ಸಂದರ್ಶನಗಳಲ್ಲಿ ಮಾನಹಾನಿಕರ ಮತ್ತು ಆಧಾರರಹಿತ ಟೀಕೆಗಳನ್ನು ಮಾಡಿದ್ದಾರೆ ಎಂದು ನಟಿ ಕಂಗನಾ ರಣಾವತ್​ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಆದರೆ, ಜಾವೇದ್ ಅಖ್ತರ್ ದಾಖಲಿಸಿರುವ ಮಾನಹಾನಿ ಪ್ರಕರಣದಲ್ಲಿ ಕಂಗನಾ ರಣಾವತ್ ಇಂದು ವಿಚಾರಣೆಗೆ ಹಾಜರಾಗಬೇಕಿತ್ತು. ಅವರು ವಿಚಾರಣೆಗೆ ಹಾಜರಾಗದ ಕಾರಣ ಅಂಧೇರಿ ನ್ಯಾಯಾಲಯವು ಕಂಗನಾ ವಿರುದ್ಧ ವಾರೆಂಟ್ ಹೊರಡಿಸಿದೆ.

ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಫೆಬ್ರವರಿ 1 ರಂದು ಕಂಗನಾಗೆ ಸಮನ್ಸ್ ಜಾರಿಗೊಳಿಸಿ, ಮಾರ್ಚ್ 1 ರಂದು ತನ್ನ ಮುಂದೆ ಹಾಜರಾಗುವಂತೆ ನಿರ್ದೇಶಿಸಿತ್ತು. ಆದರೆ, ರಣಾವತ್ ಇಂದು ಹಾಜರಾಗಿರಲಿಲ್ಲ. ಹಾಗಾಗಿ ವಾರೆಂಟ್ ನೀಡಲಾಗಿದೆ. ಇದರ ವಿಚಾರಣೆಯನ್ನು ಮಾರ್ಚ್ 22 ಕ್ಕೆ ಮುಂದೂಡಲಾಗಿದೆ.

ಜಾವೇದ್‌ ಅಖ್ತರ್‌ ನೀಡಿದ ದೂರಿನ ಪ್ರಕಾರ, ರಣಾವತ್ ಇತ್ತೀಚೆಗೆ ಅಖ್ತರ್ ಬಗ್ಗೆ ಕೆಲವು ಆಧಾರರಹಿತ ಕಾಮೆಂಟ್‌ಗಳನ್ನು ಮಾಡಿದ್ದು, ಇದು ಹಿರಿಯ ಕವಿ-ಗೀತರಚನೆಕಾರರ ಪ್ರತಿಷ್ಠೆಗೆ ಹಾನಿ ಉಂಟುಮಾಡಿದೆ ಎಂದು ಹೇಳಲಾಗಿದೆ.

ಜೂನ್‌ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಬಾಲಿವುಡ್‌ನಲ್ಲಿ ಪ್ರಚಲಿತದಲ್ಲಿರುವ ಗುಂಪನ್ನು ಉಲ್ಲೇಖಿಸುವಾಗ ನಟಿ ಕಂಗನಾ ರಣಾವತ್ ಅಖ್ತರ್ ಹೆಸರನ್ನು ಎಳೆದು ತಂದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

“ನಟ ಹೃತಿಕ್ ರೋಷನ್ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಬೇಡಿ ಎಂದು ಅಖ್ತರ್ ಬೆದರಿಕೆ ಹಾಕಿದ್ದಾರೆ ಎಂದೂ ರಣಾವತ್ ಹೇಳಿದ್ದಾರೆ. ರಣಾವತ್ ನೀಡಿದ ಈ ಎಲ್ಲಾ ಹೇಳಿಕೆಗಳು ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿವೆ ಮತ್ತು ಇದರಿಂದಾಗಿ ಅಖ್ತರ್ ಅವರ ಖ್ಯಾತಿಗೆ ಕಳಂಕವಾಗಿದೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *