ತಪಾಸಣೆ ವೇಳೆ ವಾಗ್ವಾದ; ಯುವತಿಯೋರ್ವಳಿಗೆ ಕಪಾಳಕ್ಕೆ ಹೊಡೆದು ದರ್ಪ ತೋರಿದ್ದ ಮಹಿಳಾ ಪಿಎಸ್ಐ; ವಿಡಿಯೋ ವೈರಲ್!

ಮಂಡ್ಯ: ಮಂಡ್ಯದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ದ್ವಿಚಕ್ರ ವಾಹನ ದಾಖಲೆ ತಪಾಸಣೆ ವೇಳೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಮಹಿಳಾ ಪಿಎಸ್ಐ ಸವಿತಾಗೌಡ ಪಾಟೀಲ್ ಯುವತಿಯೋರ್ವಳಿಗೆ ಕಪಾಳಕ್ಕೆ ಹೊಡೆದು ದರ್ಪ ತೋರಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಡ್ಯದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಈ ಘಟನೆ ನಡೆದಿದೆ. ಪಿಎಸ್‌ಐ ಹೊಡೆದ ಬಳಿಕ ಯುವತಿಯೂ ಏಕವಚನದಲ್ಲಿ ಪಿಎಸ್‌ಐ ಸವಿತಾಗೌಡ ಪಾಟೀಲ್‌ ಅವರನ್ನು ನಿಂದಿಸಿದ್ದಾರೆ. ಈ ಬಗ್ಗೆ ಯುವತಿಯು ಸ್ಥಳದಲ್ಲಿದ್ದ ಹಿರಿಯರೊಬ್ಬರ ಗಮನ ಸೆಳೆದಾಗ ಅವರೂ ಸಹ ಪೊಲೀಸ್​ ಅಧಿಕಾರಿಯ ದರ್ಪವನ್ನು ಪ್ರಶ್ನಿಸಿದ್ದಾರೆ. ಇದಿಷ್ಟೂ ಪೊಲೀಸರೇ ವಿಡಿಯೋ ಮಾಡಿಕೊಂಡಿದ್ದು ಅದೀಗ ವೈರಲ್​ ಆಗಿದೆ. ಮತ್ತು ಪಿಎಸ್‌ಐ ವರ್ತನೆ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಾಯಿತೆಂದರೆ ಮಂಡ್ಯದ ನೂರಡಿ ರಸ್ತೆಯ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಯುವತಿ ಚಲಾಯಿಸುತ್ತಿದ್ದ ಸ್ಕೂಟರ್​ಅನ್ನು ತಡೆದು ದಾಖಲಾತಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ನನ್ ಸ್ಕೂಟರ್ ಅನ್ನ ಯಾಕ್ ಮುಟ್ತಿದ್ದೀರಾ ಎಂದು ಯುವತಿ ಆವಾಜ್ ಹಾಕಿದ್ದಾರೆ. ಸ್ಕೂಟರ್ ಮೇಲೆ ಕುಳಿತು ನಾನ್ ಗಾಡಿ ಯಾಕ್ ಕೊಡ್ಲಿ ಎಂದು ಆವಾಜ್ ಹಾಕಿದ್ದಾರೆ. ಸ್ಕೂಟರ್ ನಿಂದ ಇಳಿಯಮ್ಮ, ನಿನ್ ಹೆಸರೇನು? ನಿಮ್ ತಂದೆ ಕರೆಸು. ಠಾಣೆಗೆ ಬಾ ಎಂದು ಮಹಿಳಾ ಪಿಎಸ್ ಐ ಸೂಚಿಸಿದ್ದಾರೆ. ಆ ವೇಳೆ ಇದ್ದಕ್ಕಿದ್ದಂತೆ ಯುವತಿ ಮತ್ತು ಮಂಡ್ಯದ ಮಹಿಳಾ ಠಾಣೆ ಪಿಎಸ್ ಐ ಸವಿತಾಗೌಡ ಪಾಟೀಲ್ ಪರಸ್ಪರ ನಿಂದನೆಯಲ್ಲಿ ತೊಡಗಿದ್ದಾರೆ.

ಈ ವೇಳೆ ಮಹಿಳಾ ಪಿಎಸ್ಐ ಕುರಿತು ಹೇ ನನ್ ತಂದೆ ಇಲ್ಲ. ಎಲ್ಲರನ್ನು ಕರೆಸಲಾಗಲ್ಲ ಎಂದು ಯುವತಿ ಆಕ್ರೋಶಗೊಂಡಿದ್ದಾಳೆ. ಈ ವೇಳೆ ತಾಳ್ಮೆ ಕಳೆದುಕೊಂಡ ಮಹಿಳಾ ಪಿಎಸ್ ಐ ಸವಿತಾ ಗೌಡ ನನ್ನನ್ನೇ ಹೇ ಅಂತೀಯಾ? ಲೋಫರ್ ಮುಂ* ಏನ್ ಮಾತಾಡ್ತಿಯಾ? ಎಂದು ಯುವತಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಈ ವೇಳೆ ಇನ್ನೂ ಜೋರಾಗಿ ಕೂಗಾಡಿದ ಯುವತಿ. ಹೇ ಏನು, ಯಾರು ನೀನು ನನ್ ಮೇಲೆ ಕೈ ಮಾಡೋಕೆ? ಇದನ್ನ ವಿಡಿಯೊ ಮಾಡ್ಲಾ? ಯಾವಳೆ ನೀನು ನನಗೆ ಹೊಡೆಯೋಕೆ ಹೇ ಎಂದು ಯುವತಿ ವ್ಯಗ್ರಗೊಂಡಿದ್ದಾರೆ. ಆ ವೇಳೆ ಮಹಿಳಾ ಪಿಎಸ್ ಐ ಮತ್ತೊಂದು ಏಟು ಕೊಟ್ಟಿದ್ದಾರೆ. ಯುವತಿಯು ಆಗ ಹೇ ಏನೆ ಮಾಡ್ತಿಯಾ ರಾಸ್ಕಲ್? ಎಂದು ಮಹಿಳಾ ಪಿಎಸ್ ಐಗೆ ಅವಾಜ್ ಹಾಕಿದ್ದಾರೆ. ಠಾಣೆಗೆ ಬಾ ನೀನು ಎಂದು ಸಿಬ್ಬಂದಿಯಿಂದ ಸ್ಕೂಟರ್ ತೆಗೆಸಿಕೊಂಡು ಪಿಎಸ್ ಐ ಸ್ಥಳದಿಂದ ತೆರಳಿದ್ದಾರೆ.

ಈ ವೇಳೆ ಮಹಿಳಾ ಪಿಎಸ್ ಐ ಕುರಿತು ಅನ್ ಎಜುಕೇಟೆಡ್ ಬ್ರೂಟ್ ಎಂದು ಯುವತಿ ಬೈದಿದ್ದಾರೆ. ಅದಕ್ಕೆ.. ನಾನು ಎಜುಕೇಟೆಡ್, ನೀನೆ ಅನ್ ಎಜುಕೇಟೆಡ್ ಎಂದು ಮಹಿಳಾ ಪಿಎಸ್ ಐ ಗುಡುಗಿದ್ದಾರೆ.

Leave a Reply

Your email address will not be published. Required fields are marked *