ನಾನು ಶಾಂತಿಗೆ ಕರೆಕೊಡದಿದ್ದಲ್ಲಿ ಇಡೀ ಊರೇ ಹೊತ್ತಿ ಉರಿಯುತ್ತಿತ್ತು: ಇಮಾಮ್ ರಾಷಿದಿ

ನ್ಯೂಸ್ ಕನ್ನಡ ವರದಿ(12-04-2018): ಒಂದು ವೇಳೆ ನಾನು ಒಪ್ಪಿಗೆಯನ್ನು ನೀಡುತ್ತಿದ್ದರೆ ಗುಂಪೊಂದು ಇಡೀ ಅಸನ್ ಸೋಲ್ ನಗರಕ್ಕೆ ಬೆಂಕಿ ಹಚ್ಚಲು ತಯಾರಾಗಿತ್ತು ಎಂದು ಪಶ್ಚಿಮ ಬಂಗಾಲದ ಅಸನ್ ಸೋಲ್ ನಲ್ಲಿ ಇತ್ತೀಚೆಗೆ ನಡೆದ ಕೋಮು ಸಂಘರ್ಷದಲ್ಲಿ ತನ್ನ ಮಗನನ್ನು ಕಳೆದುಕೊಂಡ ಇಮಾನ್ ರಾಷಿದಿ ಯವರು ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.

ಟಿವಿ ವಾಹಿನಿಯೊಂದಿಗೆ ಸಂದರ್ಶನ ಒಂದರಲ್ಲಿ ಮಾತನಾಡುತ್ತಿದ್ದ ಇಮಾಮ್ ರಾಷಿದಿಯವರು, “ರಾಮನವಮಿಯ ದಿನ ಗಲಭೆ ಭುಗಿಲೆದ್ದಾಗ ನನ್ನ ಕಿರಿಯ ಮಗ ಸಿಬ್ಗತುಲ್ಲಾ ಮಸೀದಿಯಲ್ಲಿ ನಮಾಝ್ ಮಾಡುತ್ತಿದ್ದ, ಅಕ್ಕಪಕ್ಕದಲ್ಲಿ ಬೊಬ್ಬೆ ಕೇಳಿ ಹೊರ ಹೋದವನನ್ನು ಮತ್ತೆ ಕಾಣಲೇ ಇಲ್ಲ. ಅವನನ್ನು ಹುಡುಕಲು ಹೋದ ನನ್ನ ಹಿರಿಯ ಮಗನನ್ನು ಪೊಲೀಸರು ಬಂಧಿಸಿದರು. ಮರುದಿನ ಚರಂಡಿಯಲ್ಲಿ ಮಗನ ಶವ ಬಿದ್ದಿರುವ ಬಗ್ಗೆ ಮಾಹಿತಿ ಬಂತು. ಹೋಗಿ ನೋಡಿದಾಗ ನಿರ್ದಯವಾಗಿ ಹೊಡೆದು ಕೊಂಡ ಮಗನ ಶವ ಬಿದ್ದಿತ್ತು. ದುಷ್ಕರ್ಮಿಗಳು ಅವನ ಶವವನ್ನು ವಿಕಾರಗೊಳಿಸಿದ್ದರು. ಅವನ ಉಗುರನ್ನು ಕೀಳಲಾಗಿತ್ತು. ಆ ಶವದ ಅವಸ್ಥೆ ನೋಡಿ ನನಗೆ ಅಳು ತಡೆಯಲಾಗಲಿಲ್ಲವಾದರೂ, ಆ ಸಮಯದಲ್ಲಿ ನಾನು ಊರಿನ ಮಸೀದಿಯ ಇಮಾಮ್ ನಾನು ಅತ್ತರೆ ಜನರು ಆಕ್ರೋಶಿತರಾಗಿ ಊರನ್ನೇ ನಾಶ ಮಾಡಿಬಿಡುವರು ಎಂದು ಭಾವಿಸಿ ಜಾಗೃತನಾದೆ. ಆದ್ದರಿಂದ ನಾನು ಅಳಲಿಲ್ಲ. ಜನರಿಗೆ ಶಾಂತಿಯ ಕರೆ ನೀಡಿದೆ” ಎಂದು ಹೇಳಿದ್ದಾರೆ.

“ಮಗನ ಸಾವಿನ ಬಳಿಕ ಹಲವಾರು ಮಂದಿ ನನ್ನ ಬಳಿ ಬಂದು ಪ್ರತಿಕಾರದ ಮಾತನ್ನಾಡಿದರು, ಆದರೆ ನೀವು ಹಿಂಸೆಗೆ ಇಳಿದರೆ ನಾನು ಊರನ್ನೇ ತೊರೆದು ಹೋಗುವೆ ಎಂದು ಅವರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದೆ. ನನ್ನಲ್ಲಿ ಈಹ್ಗ ಬೆಟ್ಟದಷ್ಟು ದುಃಖ ಮಡುಗಟ್ಟಿದ್ದರೂ ಕೂಡ ಊರಲ್ಲಿ ಶಾಂತಿ ನೆಲಸಲಿ ಎಂದು ಬಯಸುತ್ತೇನೆ. ಅಲ್ಲಾಹನು ನನ್ನ ಮಗನಿಗೆ ಅಷ್ಟೇ ಆಯುಷ್ಯ ಕರುಣಿಸಿದ್ದ ಎಂದು ನನಗೆ ನಾನೇ ಸಮಾಧಾನ ತಂದುಕೊಂಡು ನಿರಾಳನಾಗುತ್ತಿದ್ದೇನೆ” ಎಂದು ಇಮಾಮ್ ಇಮ್ದಾದುಲ್ ರಾಷಿದಿಯವರು ಅಳುತ್ತಾ ಹೇಳಿದರು.

Leave a Reply

Your email address will not be published. Required fields are marked *