ಮೆಕ್ಸಿಕೋದಲ್ಲಿ ಪೊಲೀಸ್ ಬೆಂಗಾವಲು ಪಡೆಗಳ ಮೇಲೆ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿ; 13 ಮಂದಿ ಅಧಿಕಾರಿಗಳ ಸಾವು

ಮೆಕ್ಸಿಕೋ: ಮೆಕ್ಸಿಕೋದಲ್ಲಿ ಡ್ರಗ್ಸ್ ಮಾಫಿಯಾ ದಾಳಿ ತಾರಕಕ್ಕೇರಿದ್ದು, ಪೊಲೀಸ್ ಬೆಂಗಾವಲು ಪಡೆಗಳ ಮೇಲೆ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 13 ಮಂದಿ ಅಧಿಕಾರಿಗಳು ಸಾವನ್ನಪ್ಪಿದ್ದಾರೆ.

ಮೂಲಗಳ ಪ್ರಕಾರ ಪೊಲೀಸ್ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ ನಡೆಸಿರುವ ಡ್ರಗ್ ಗ್ಯಾಂಗ್ 8 ಪೊಲೀಸರು ಮತ್ತು 3 ಪ್ರಾಸಿಕ್ಯೂಶನ್ ಅಧಿಕಾರಿಗಳನ್ನು ಹತ್ಯೆ ಮಾಡಿದೆ. 2019ರಿಂದೀಚೆಗೆ ಮೆಕ್ಸಿಕೋದಲ್ಲಿ ನಡೆದ ಅತಿ ದೊಡ್ಡ ಹತ್ಯಾಕಾಂಡ ಇದಾಗಿದೆ. ಅಕ್ಟೋಬರ್, 2019ರಲ್ಲಿ ನೆರೆಯ ಮೈಕೋವಕಾನ್‌ನಲ್ಲಿ ಬಂದೂಕುಧಾರಿಗಳು 14 ಪೊಲೀಸರನ್ನು ಕೊಂದು ಹಾಕಿದ್ದರು.

ಇನ್ನು ಅಧಿಕಾರಿಗಳ ಹತ್ಯೆ ಬಳಿಕ ಮೆಕ್ಸಿಕೊ ನಗರದ ನೈರುತ್ಯ ದಿಕ್ಕಿನಲ್ಲಿರುವ ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಮಾದಕ ವ್ಯಸನಿಗಳಿರುವ ಪ್ರದೇಶಗಳಲ್ಲಿ ಕೊಲೆಗಡುಕರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಸೈನಿಕರು, ನೌಕಾಪಡೆಯ ಸಿಬ್ಬಂದಿಗಳು ಮತ್ತು ರಾಷ್ಟ್ರೀಯ ಗಾರ್ಡ್ ಪಡೆಗಳು ಈ ಪ್ರದೇಶದಲ್ಲಿ ಭೂ ಮತ್ತು ವಿಮಾನಗಳ ಮೂಲಕ ಕೊಲೆಗಾರರಿಗಾಗಿ ಶೋಧ ನಡೆಸುತ್ತಿವೆ ಎಂದು ರಾಜ್ಯ ಸಾರ್ವಜನಿಕ ಸುರಕ್ಷತಾ ವಿಭಾಗದ ಮುಖ್ಯಸ್ಥ ರೊಡ್ರಿಗೋ ಮಾರ್ಟಿನೆಜ್ ಸೆಲಿಸ್ ಹೇಳಿದ್ದಾರೆ.

‘ಈ ಪ್ರದೇಶದಲ್ಲಿ ಕ್ರಿಮಿನಲ್ಸ್ ಗುಂಪುಗಳ ವಿರುದ್ಧ ಕ್ರಮ ಜರುಗಿಸಲು ಪೊಲೀಸ್ ವಾಹನವು ಗಸ್ತು ತಿರುಗುತ್ತಿತ್ತು. ಈ ವೇಳೆ ಬಂದೂಕುದಾರಿಗಳಿಂದ ದಾಳಿ ನಡೆದಿದೆ. ಈ ಆಕ್ರಮಣವು ಮೆಕ್ಸಿಕನ್ ಸರ್ಕಾರದ ಮೇಲಿನ ಆಕ್ರಮಣವಾಗಿದ್ದು, ನಮ್ಮೆಲ್ಲ ಶಕ್ತಿ ಒಟ್ಟುಗೂಡಿಸಿ ಮರು ದಾಳಿ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಬಂದೂಕುಧಾರಿಗಳು ಯಾವ ಗ್ಯಾಂಗ್ ಅಥವಾ ಕಾರ್ಟೆಲ್ಗೆ ಸೇರಿದವರು ಎಂಬುದರ ಬಗ್ಗೆ ತಕ್ಷಣಕ್ಕೆ ಮಾಹಿತಿ ಸಿಕ್ಕಿಲ್ಲ.

ಇನ್ನು ದಾಳಿ ನಡೆದ ಈ ಪಟ್ಟಣವು ಇಕ್ಸ್ಟಾಪನ್ ಡೆ ಲಾ ಸಾಲ್ ಎಂದು ಕರೆಯಲ್ಪಡುವ ಬಿಸಿನೀರಿನ ಬುಗ್ಗೆಗಳ ರೆಸಾರ್ಟ್ ಬಳಿ ಇದ್ದು, ಇದು ಮೆಕ್ಸಿಕೊ ನಗರ ನಿವಾಸಿಗಳಲ್ಲಿ ವಾರಾಂತ್ಯದ ಪ್ರಮುಖ ರಜಾ ತಾಣವಾಗಿ ಜನಪ್ರಿಯವಾಗಿದೆ.

Leave a Reply

Your email address will not be published. Required fields are marked *