ರಾಜ್ಯದಲ್ಲಿ ಲಾಕ್​ಡೌನ್ ಮಾಡುವುದಾದರೆ ಪ್ರತಿ ಕುಟುಂಬಕ್ಕೂ ಹತ್ತು ಸಾವಿರ ರೂಪಾಯಿ ಕೊಟ್ಟು ಮಾಡಲಿ: ಸಿದ್ದರಾಮಯ್ಯ ಸಲಹೆ

ಬೀದರ್​: ರಾಜ್ಯದಲ್ಲಿ ಕೊರೊನಾ ಸೋಂಕಿನ ಭೀತಿ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕಠಿಣ ಕ್ರಮದ ಕುರಿತು ಕರ್ನಾಟಕ ರಾಜ್ಯ ಸರ್ಕಾರ ಚಿಂತಿಸುತ್ತಿರುವ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಲಾಕ್​ಡೌನ್ ಕುರಿತು ಮಾತನಾಡಿ ಲಾಕ್​ಡೌನ್ ಮಾಡುವುದಾದರೆ ಪ್ರತಿ ಕುಟುಂಬಕ್ಕೂ ಹತ್ತು ಸಾವಿರ ರೂಪಾಯಿ ಕೊಟ್ಟು ಮಾಡಲಿ ಎಂದು ಹೇಳಿದ್ದಾರೆ.

ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಈ ಸರ್ಕಾರದವರು ಸೋಂಕು ಕಡಿಮೆಯಾದ ಕೂಡಲೇ ಎಲ್ಲವಕ್ಕೂ ಅನುಮತಿ ನೀಡಿದರು. ಸಭೆ, ಸಮಾರಂಭಗಳು ಎಗ್ಗಿಲ್ಲದೇ ನಡೆಯುವಾಗ ಬಿಗಿ ಕ್ರಮ ಕೈಗೊಳ್ಳಲಿಲ್ಲ. ಈಗ ಲಾಕ್​ಡೌನ್​ ಅಂತಾರೆ. ಆದ್ರೆ ಸೋಂಕು ನಿಯಂತ್ರಣಕ್ಕೆ ಲಾಕ್​ಡೌನ್ ಪರಿಹಾರ ಅಲ್ಲ ಎಂದು ಟೀಕಿಸಿದ್ದಾರೆ.

ಕೊರೊನಾ ನಿಯಂತ್ರಿಸಲು ಲಾಕ್​ಡೌನ್ ಪರಿಹಾರ ಅಲ್ಲ. ಮೊದಲು ರೋಗ ಹೇಗೆ ಹರಡುತ್ತಿದೆ ಎನ್ನುವುದನ್ನು ಕಂಡುಹಿಡಿಯಬೇಕು. ಅದಕ್ಕೆ ಚಿಕಿತ್ಸೆ ಕೊಡಬೇಕು. ಆ ಮೂಲಕ ಅದನ್ನು ತಡೆಗಟ್ಟಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಲಾಕ್​ಡೌನ್​ ಮಾಡುವುದೇ ಆದರೆ ಒಂದು ಕೋಟಿ ಕುಟುಂಬಗಳಿಗೆ ತಲಾ ಹತ್ತು ಸಾವಿರ ರೂಪಾಯಿ ನೀಡಲಿ. ಎಲ್ಲರಿಗೂ ಕಡ್ಡಾಯವಾಗಿ ಕೊರೊನಾ ಲಸಿಕೆ ವಿತರಿಸಲಿ ಎಂದು ಆಗ್ರಹಿಸಿದ್ದಾರೆ.

ಸೋಂಕು ಇಳಿಮುಖವಾಗುತ್ತಿದ್ದಂತೆಯೇ ಹೊರಗಿನಿಂದ ಬಂದವರನ್ನು ಪರೀಕ್ಷೆ ಮಾಡಲಿಲ್ಲ. ಬಿಗಿ ಕ್ರಮ ಕೈಗೊಳ್ಳೊದು ಬಿಟ್ಟರು. ಎಲ್ಲವಕ್ಕೂ ಅನುಮತಿ ನೀಡಿದರು. ಈಗ ಸೋಂಕು ಹರಡುತ್ತಿರುವಾಗ ಎಚ್ಚೆತ್ತುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ, ಸರಕಾರ ಸರ್ವಪಕ್ಷ ನಿಯೋಗದ ಸಭೆ ಬಗ್ಗೆ ಮಾತನಾಡಿ ಅವರು ಕರೆಯದೇ ನಾನು ಹೋಗಲಾ ಎಂದು ಪ್ರಶ್ನಿಸಿ, ಸಭೆಗೆ ಕರೆಯಲಿ ಆಮೇಲೆ ನೋಡೋಣ ಎಂದಿದ್ದಾರೆ.

Leave a Reply

Your email address will not be published. Required fields are marked *