ರಾಜ್ಯದಲ್ಲಿ ಏ. 16ರಂದು ನಿರ್ಧಾರ ಆಗಲಿದೆ ವೀಕೆಂಡ್ ಲಾಕ್ ಡೌನ್ !

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಪ್ರಕರಣಗಳು ನಿರೀಕ್ಷೆಮೀರಿ ಎಗ್ಗಿಲ್ಲದೇ ಏರಿಕೆ ಆಗುತ್ತಿವೆ. ದಿನವೊಂದಕ್ಕೆ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ 10 ಸಾವಿರ ದಾಟಿ ಹೋಗುತ್ತಿದೆ. ಮೊದಲ ಅಲೆಗಿಂತಲೂ ಸೋಂಕಿನ ಎರಡನೇ ಅಲೆ ತೀವ್ರಮಟ್ಟದಲ್ಲಿದೆ. ಈಗಾಗಲೇ ಎರಡು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಂಟು ನಗರಗಳಲ್ಲಿ ಕೊರೋನಾ ಕರ್ಫ್ಯೂ (Nigh Curfew) ಹೇರಲಾಗಿದೆ. ಆದರೂ ಪರಿಸ್ಥಿತಿ ತಹಬದಿಗೆ ಬರುವ ಲಕ್ಷಣ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಇನ್ನಷ್ಟು ಬಿಗಿಕ್ರಮಗಳನ್ನ ಕೈಗೊಳ್ಳಲು ನಿರ್ಧರಿಸಿದೆ. ಬೆಂಗಳೂರಿನಲ್ಲಿ ಈ ವಾರಾಂತ್ಯದ ಎರಡು ದಿನಗಳನ್ನ ಲಾಕ್ ಡೌನ್ ಮಾಡಲು ಸರಕಾರ ಗಂಭೀರ ಚಿಂತನೆ ನಡೆಸಿರುವುದು ಮೂಲಗಳಿಂದ ತಿಳಿದುಬಂದಿದೆ. ಏಪ್ರಿಲ್ 16ರಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆಯೊಂದು ನಡೆಯಲಿದ್ದು, ಆಗ ಈ ಬಗ್ಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಒಂದು ವೇಳೆ ವೀಕೆಂಡ್ ಲಾಕ್ ಡೌನ್ ಆದಲ್ಲಿ ಶನಿವಾರ ಬೆಳಗ್ಗೆ 10ಗಂಟೆಯಿಂದ ಪ್ರಾರಂಭವಾಗಿ ಸೋಮವಾರ ಬೆಳಗ್ಗೆ 5ಗಂಟೆಯವರೆಗೆ ಇಡೀ ರಾಜ್ಯ ಸ್ತಬ್ದಗೊಳ್ಳುವುದು ನಿಶ್ಚಿತವಾಗುತ್ತದೆ. ಸರ್ಕಾರ ಇದು ಬಿಟ್ಟರೆ ಬೇರೆ ದಾರಿ ಇಲ್ಲವೆಂಬಂತಾಗಿದೆ. ಮೊದಲಿಗೆ ಬೆಂಗಳೂರಿನಲ್ಲಿ ವೀಕೆಂಡ್ ಲಾಕ್ ಡೌನ್​ನ ಪ್ರಯೋಗ ಆಗಲಿದೆ. ನಂತರ ಉಳಿದ ಏಳು ನಗರಗಳಲ್ಲಿ ಇದನ್ನು ವಿಸ್ತರಿಸುವ ಯೋಚನೆ ಸದ್ಯಕ್ಕೆ ಇದ್ದಂತಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಮೂರು ದಿನಗಳ ಲಾಕ್ ಡೌನ್ ಪ್ರಯೋಗ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆವರೆಗೂ ಅಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಅದೇ ಮಾದರಿಯನ್ನು ರಾಜ್ಯ ಸರ್ಕಾರವೂ ಅನುಸರಿಸಲಿದೆ. ಮಸ್ಕಿ ಉಪಚುನಾವಣೆಯ ಪ್ರಚಾರದಲ್ಲಿರುವ ಸಿಎಂ ಯಡಿಯೂರಪ್ಪ ಅವರು ಏಪ್ರಿಲ್ 15ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಮರುದಿನ, ಅಂದರೆ ಏಪ್ರಿಲ್ 16ರಂದು ಅವರು ಸಭೆ ನಡೆಸಲಿದ್ದಾರೆ. ಸರ್ಕಾರದ ಪ್ರಮುಖ ಅಧಿಕಾರಿಗಳು, ತಜ್ಞರು ಮತ್ತಿತರರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ, ವೀಕೆಂಡ್ ಲಾಕ್ ಡೌನ್ ಸೇರಿದಂತೆ ವಿವಿಧ ಸಂಭಾವ್ಯ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎಂದು ವಿಶ್ವಸನೀಯ ಮೂಲಗಳು ಹೇಳುತ್ತಿವೆ.

ಈ ಹಿಂದೆಯೂ ಕೆಲ ತಜ್ಞರು ರಾಜ್ಯಾದ್ಯಂತೆ 10 ದಿನಗಳ ಕಾಲ ಲಾಕ್ ಡೌನ್ ಮಾಡುವ ಅಗತ್ಯತೆ ಇದೆ ಎಂಬ ಸಲಹೆಯನ್ನ ನೀಡಿದ್ದರು. ಆದರೆ, ಕಳೆದ ವರ್ಷ ಸುದೀರ್ಘ ಕಾಲ ಲಾಕ್ ಡೌನ್ ಮಾಡಿದ ಪರಿಣಾಮ ಆರ್ಥಿಕತೆಗೆ ಬಹಳ ದೊಡ್ಡ ಹೊಡೆತ ಕೊಟ್ಟಿತ್ತು. ಜನರ ಬದುಕು ಬೀದಿಗೆ ಬರುವಂತಾಗಿತ್ತು. ಲಾಕ್ ಡೌನ್ ಹಿಂಪಡೆದ ಬಳಿಕ ಪರಿಸ್ಥಿತಿ ತಹಬದಿಗೆ ಬಂದಿತ್ತು. ಕೊರೋನಾ ಸೋಂಕಿನ ಮೊದಲ ಅಲೆ ಕೂಡ ಮೆತ್ತಗಾಗಿತ್ತು. ಈಗ ಮತ್ತೊಮ್ಮೆ ಲಾಕ್ ಡೌನ್ ಮಾಡುವುದು ಸರ್ಕಾರಕ್ಕೆ ಅಂತಿಮ ಅಸ್ತ್ರ ಮಾತ್ರವಾಗಿದೆ. ಹೀಗಾಗಿ, ತಜ್ಞರು ಹತ್ತು ದಿನಗಳ ಲಾಕ್ ಡೌನ್ ಸಲಹೆ ನೀಡಿದಾಗ ಸರ್ಕಾರ ನಯವಾಗಿಯೇ ತಿರಸ್ಕರಿಸಿದೆ. ಲಾಕ್ ಡೌನ್ ಬಿಟ್ಟು ಬೇರೆ ಮಾರ್ಗಗಳನ್ನ ಮೊದಲು ಹುಡುಕೋಣ ಎಂಬುದು ಸರ್ಕಾರದ ನಿಲುವಾಗಿದೆ. ಇವ್ಯಾವುದೂ ವರ್ಕೌಟ್ ಆಗದಿದ್ದಾಗ ಮಾತ್ರ ಲಾಕ್ ಡೌನ್ ಅಸ್ತ್ರ ಪ್ರಯೋಗಿಸಬೇಕೆಂಬ ಅಭಿಪ್ರಾಯ ಸರ್ಕಾರದ್ದಾಗಿದೆ.

ಕೊರೋನಾ ವಿಚಾರದಲ್ಲಿ ಜನರು ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಲಾಕ್ ಡೌನ್ ಕ್ರಮ ಅನಿವಾರ್ಯವಾಗಬಹುದು ಎಂಬ ಎಚ್ಚರಿಕೆಯ ಸಂದೇಶವನ್ನೂ ಅರೋಗ್ಯ ಸಚಿವ ಸುಧಾಕರ್ ಸೇರಿದಂತೆ ಹಲವರು ಈಗಾಗಲೇ ನೀಡಿದ್ದಾರೆ. ರಾಜ್ಯದ ಏಳು ನಗರಗಳಲ್ಲಿ ಏಪ್ರಿಲ್ 20ರವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಇದು ಪೂರ್ಣ ಲಾಕ್​ಡೌನ್​ಗೆ ವಿಸ್ತರಣೆ ಆದರೆ ಅಚ್ಚರಿ ಏನಿಲ್ಲ ಎನ್ನುತ್ತವೆ ಮೂಲಗಳು.

Leave a Reply

Your email address will not be published. Required fields are marked *