ಕೋವಿಡ್​​ ಸಾವನ್ನಪ್ಪಿದವರ ಅಂತ್ಯಕ್ರಿಯೆ ನಡೆಸಲು ಸಾವಿರಾರು ರೂ. ಹಣದ ಬೇಡಿಕೆ ಇಡುತ್ತಿರುವ ಚಿತಾಗಾರದ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ ಸಚಿವ

ಬೆಂಗಳೂರು: ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಅದರಲ್ಲಿಯೂ ರಾಜಧಾನಿಯಲ್ಲಿ ಸೋಂಕಿನ ಸಾವಿನ ಸಂಖ್ಯೆ ಆಘಾತ ಮೂಡಿಸುತ್ತಿದೆ. ಸಾವನ್ನಪ್ಪಿದ ಸೋಂಕಿತರನ್ನು ಕೋವಿಡ್​ ನಿಯಮಾವಳಿಗಳಂತೆ ಅಂತ್ಯಸಂಸ್ಕಾರ ಮಾಡಬೇಕಿದೆ. ಇದಕ್ಕಾಗಿ ಗಂಟೆಗಟ್ಟಲೇ ಚಿತಾಗಾರದ ಮುಂದೆ ಕಾಯುವ ಪರಿಸ್ಥಿತಿ ಕೂಡ ಉದ್ಭವಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಚಿತಾಗಾರದ ಸಿಬ್ಬಂದಿಗಳು ದುಡ್ಡು ದೋಚಲು ಮುಂದಾಗಿವೆ. ಕೋವಿಡ್​​ ಸಾವನ್ನಪ್ಪಿದವರ ಅಂತ್ಯಕ್ರಿಯೆ ನಡೆಸಲು ಸಾವಿರಾರು ರೂಪಾಯಿ ಹಣದ ಬೇಡಿಕೆ ಇಡುತ್ತಿದ್ದಾರೆ. ಹಣ ಕೊಟ್ಟರೆ ಅಂತ್ಯ ಸಂಸ್ಕಾರ ಮಾಡುತ್ತಾರೆ. ಇಲ್ಲ ಎಂದರೆ, ಸುಮ್ಮನೆ ದಿನವೀಡಿ ಕಾಯಿಸುತ್ತಿದ್ದಾರೆ ಎಂದು ಸಾವನ್ನಪ್ಪಿದ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸುಮ್ಮನಹಳ್ಳಿ, ಬನಶಂಕರಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಚಿತಾಗಾರದಲ್ಲಿ ಹಣ ವಸೂಲಿ ಆರೋಪ ಕೇಳಿ ಬಂದಿದೆ.

ಕೋವಿಡ್​ ಸಾವನ್ನಪ್ಪಿದವರ ತಕ್ಷಣದ ಅಂತ್ಯ ಸಂಸ್ಕಾರಕ್ಕೆ 5ರಿಂದ 10 ಸಾವಿರ ಹಣಕ್ಕೆ ಡಿಮ್ಯಾಂಡ್​ ಮಾಡಲಾಗಿದೆ. ದುಡ್ಡು ಕೊಟ್ಟಿಲ್ಲ ಎಂದರೆ, ಹಿಂದೆ ಬಂದವರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಹಣ ಇಲ್ಲದ ಸೋಂಕಿತ ಕುಟುಂಬಸ್ಥರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಉದ್ಭವಿಸಿದೆ. ಅಲ್ಲದೇ, ಅಂತ್ಯಕ್ರಿಯೆಗೆ ಹಣ ಪಡೆದಿದ್ದಕ್ಕೆ ಯಾವುದೇ ರಶೀದಿಯನ್ನು ನೀಡುತ್ತಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಹೆಣದ ಮೇಲಿನ ಈ ಹಣ ವಸೂಲಿ ಕ್ರಿಯೆ ಬಗ್ಗೆ ಅಸಮಾಧಾನ ಹೊರ ಹಾಕಿರುವ ಆರೋಗ್ಯ ಸಚಿವ ಕೆ ಸುಧಾಕರ್​​, ಸೋಂಕಿತರ ಅಂತ್ಯಕ್ರಿಯೆಗೆ ಹಣ ಪಡೆದರೆ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಹೆಣದ ಮೇಲೆ ಶೋಷಣೆ ಸರಿಯಲ್ಲ. ಆ್ಯಂಬುಲೆನ್ಸ್ ದುಡ್ಡು ವಸೂಲಿ ಮಾಡಿದರೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಈ ರೀತಿಯ ಪ್ರಕರಣ ಕಂಡು ಬಂದರೆ, ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ಈ ಹಿನ್ನಲೆ ಯಾರು ಕೂಡ ಇಂತಹ ಕೆಲಸ‌ ಮಾಡಬಾರದು ಎಂದು ಎಚ್ಚರಿಸಿದ್ದಾರೆ.

ಚಿತಾಗಾರಗಳ ಮುಂದೆ ಸರತಿ ಸಾಲು ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಿನ್ನೆ ಬೆಂಗಳೂರಲ್ಲಿ ಕೆಲವಷ್ಟು ಸಾವು ಸಂಭವಿಸಿದೆ. ಕೋವಿಡ್ ಕಾರಣದಿಂದಲೇ ಈ ಎಲ್ಲ ಸಾವು ನಡೆದಿಲ್ಲ. ಚಿತಾಗಾರಗಳ ಮುಂದೆ ಕ್ಯೂ ಎಂಬುದು ನೋಡಿದೆ. ಆದರೆ ಆ ರೀತಿಯ ಯಾವುದೇ ಕೊರತೆ ಇಲ್ಲ ಎಂದಿದ್ದಾರೆ.

ಘಟನೆ ಕುರಿತು ತಕ್ಷಣಕ್ಕೆ ನಾನು ಬಿಬಿಎಂಪಿ ಆಯುಕ್ತರ ಜೊತೆ ಮಾತನಾಡಿದ್ದು, ಕೋವಿಡ್ ನಿಂದಲೇ ಸಾವು ನಡೆದಿದೆ ಎಂದು ಒಂದೇ ಚಿತಾಗಾರಕ್ಕೆ ಕಳಿಸಿದ್ದಾರೆ. ಹೀಗಾಗಿ‌ ಕ್ಯೂ ಇದೆ ಎಂಬ ಭಾವನೆ ಬಂತು. ಚಿತಾಗಾರಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಮಾಡಲಾಗಿದೆ. ನಿನ್ನೆ ಒಟ್ಟು 15 ಸಾವು ಸಂಭವಿಸಿದೆ ಎಂದರು.

Leave a Reply

Your email address will not be published. Required fields are marked *