ತಿರುವನಂತಪುರಂನ ವೈದ್ಯಕೀಯ ಕಾಲೇಜಿನಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯ ಮೃತದೇಹ ನಾಪತ್ತೆ !

ತಿರುವನಂತಪುರಂ: ಕೋವಿಡ್-19 ಸೋಂಕಿತ ವ್ಯಕ್ತಿಯ ಮೃತದೇಹ ಕುಟುಂಬ ಸದಸ್ಯರಿಗೆ ಲಭ್ಯವಾಗದೇ ನಾಪತ್ತೆಯಾಗಿರುವ ಘಟನೆ ತಿರುವನಂತಪುರಂನ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ಕೋವಿಡ್-19 ನಿಂದ ಸಾವನ್ನಪ್ಪಿದ್ದ ವ್ಯಕ್ತಿಯನ್ನು ಪ್ರಸಾದ್ ಎಂದು ಗುರುತಿಸಲಾಗಿದ್ದು, ನೆಯ್ಯತಿಂಕರದ ನಿವಾಸಿಯಾಗಿದ್ದಾರೆ. ಈ ವ್ಯಕ್ತಿಯ ಮೃತದೇಹ ದೊರೆಯದೇ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ದೂರು ದಾಖಲಿಸಿ ಸಿಬ್ಬಂದಿ ವಿರುದ್ಧ ಆರೋಪ ಮಾಡಿದ್ದರು.

ಅದೇ ಆಸ್ಪತ್ರೆಯಲ್ಲಿ ಪ್ರಸಾದ್ ಎಂಬ ಹೆಸರಿನ ಇಬ್ಬರು ಕೋವಿಡ್-19 ನಿಂದ ಮೃತಪಟ್ಟಿದ್ದಾರೆ, ಸಿಬ್ಬಂದಿಗಳು ದಾಖಲಾತಿಗಳಲ್ಲಿ ತಪ್ಪು ಮಾಡಿದ್ದರಿಂದ ಈ ಯಡವಟ್ಟು ಸಂಭವಿಸಿದೆ ಎಂದು ಕುಟುಂಬ ಸದಸ್ಯರು ದೂರಿದ್ದಾರೆ.

ನೆಯ್ಯತಿಂಕರ ಶಾಸಕ ಕೆ ಅನ್ಸಲನ್ ಈ ಬಗ್ಗೆ ಮಾಹಿತಿ ನೀಡಿದ್ದು, ಕುಟುಂಬ ಸದಸ್ಯರು ಹುಡುಕುತ್ತಿದ್ದ ಮೃತದೇಹಕ್ಕೆ ಅದಾಗಲೇ ಬೇರೊಬ್ಬರು ಅಂತ್ಯಸಂಸ್ಕಾರ ನೆರೆವೇರಿಸಿದ್ದರಿಂದ ಮೃತದೇಹ ಕಾಣೆಯಾಗಿದೆ ಎಂದು ಹೇಳಿದ್ದಾರೆ. ಮೃತದೇಹವನ್ನು ಕುಟುಂಬ ಸದಸ್ಯರಿಗೆ ನೀಡದೇ ಬೇರೊಬ್ಬರಿಗೆ ಹಸ್ತಾಂತರಿಸಿರುವುದರಿಂದ ಈ ಯಡವಟ್ಟು ಸಂಭವಿಸಿದೆ.

ಕಳೆದ ವರ್ಷ ಕೊಲ್ಲಂ ನಲ್ಲಿ ಇದೇ ಮಾದರಿಯ ಘಟನೆ ನಡೆದಿತ್ತು. ಕೋವಿಡ್-19 ಮೃತರ ದೇಹವನ್ನು ಸಂಬಂಧಿಕರಿಗಲ್ಲದೇ ಬೇರೊಬ್ಬರಿಗೆ ಹಸ್ತಾಂತರಿಸಲಾಗಿತ್ತು. ಶವಾಗಾರದಲ್ಲಿದ್ದ ಸಿಬ್ಬಂದಿಗಳ ವಿರುದ್ಧ ಅಧಿಕಾರಿಗಳು ಅಕ್ಟೋಬರ್ ಕ್ರಮ ಕೈಗೊಂಡಿದ್ದರು.

Leave a Reply

Your email address will not be published. Required fields are marked *