ಪಾಕಿಸ್ತಾನದಿಂದ ವಲಸೆ ಬಂದಿರುವ ಹಿಂದೂಗಳಿಗೆ ರಾಜಸ್ಥಾನದಲ್ಲಿ ಲಸಿಕೆ ನಿರಾಕರಣೆ !

ಜೈಪುರ: ಭಾರತದ ಪ್ರಜೆಗಳ ಪೈಕಿ 18 ವಯಸ್ಸಿನ ಮೆಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದ್ದರೆ, ಪಾಕಿಸ್ತಾನದಿಂದ ವಲಸೆ ಬಂದಿರುವ ಹಿಂದೂಗಳಿಗೆ ರಾಜಸ್ಥಾನದಲ್ಲಿ ಲಸಿಕೆಯನ್ನು ನಿರಾಕರಿಸಲಾಗುತ್ತಿದೆ.

ಅವರ ಬಳಿ ಆಧಾರ್ ಕಾರ್ಡ್ ಇಲ್ಲದೇ ಇರುವುದು ಇದಕ್ಕೆ ಪ್ರಮುಖ ಕಾರಣ. ಲಸಿಕಾ ಕೇಂದ್ರಗಳಲ್ಲಿ ಇದೇ ಕಾರಣಕ್ಕೆ ಆಧಾರ್ ಕಾರ್ಡ್ ಇಲ್ಲದೇ ಲಸಿಕೆಯನ್ನು ನೀಡಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಪ್ರಯಾಣ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಲಸಿಕೆ ನೀಡುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ.

ಬೃಹತ್ ಪ್ರಮಾಣದ ಹಿಂದೂ ವಲಸಿಗರ ಸಂಖ್ಯೆ ಭಾರತದ ಪೌರತ್ವ ಪಡೆಯುವುದಕ್ಕೆ ಕಾಯುತ್ತಿದೆ. ಭಾರತದ ಪೌರತ್ವ ಇದ್ದಲ್ಲಿ ಮಾತ್ರ ಆಧಾರ್ ಸಿಗಲಿದೆ. ಸಂತರು, ಸಂನ್ಯಾಸಿಗಳು, ಮನೆ ಇಲ್ಲದವರು ಆಧಾರ್ ಕಾರ್ಡ್ ಇಲ್ಲದೆಯೂ ಲಸಿಕೆ ಪಡೆಯುತ್ತಿದ್ದಾರೆ, ಆದರೆ ನಮಗೆ ಯಾಕೆ ಲಸಿಕೆ ನೀಡುತ್ತಿಲ್ಲ ಎಂದು ವಲಸಿಗ ಹಿಂದೂಗಳು ಕೇಳುತ್ತಿದ್ದಾರೆ.

ರಾಜಸ್ಥಾನದ ಜೋಧ್ ಪುರ ಜಿಲ್ಲೆಪಾಕಿಸ್ತಾನದಿಂದ ವಲಸೆ ಬಂದಿರುವ ಅತಿ ಹೆಚ್ಚು ಹಿಂದೂಗಳು ಇರುವ ಪ್ರದೇಶವಾಗಿದೆ. ಜೋಧ್ ಪುರದಲ್ಲಿ ಪಾಕ್ ನಿಂದ ವಲಸೆ ಬಂದ ಹಿಂದೂಗಳ 21 ಕಾಲೋನಿಗಳಿದ್ದು ಕೊರೋನಾವನ್ನು ಎದುರಿಸುತ್ತಿದ್ದಾರೆ.

ಶ್ಯಾಮ್ ಹಿರಾಣಿ ಪಾಕಿಸ್ತಾನ 2009 ನಲ್ಲಿ ಸಿಂಧ್ ಪ್ರಾಂತ್ಯದಿಂದ ಜೋಧ್ ಪುರಕ್ಕೆ ವಲಸೆ ಬಂದಿದ್ದರು. ಲಸಿಕೆ ಪಡೆಯುವುದಕ್ಕೆ ತಮ್ಮ ಕುಟುಂಬದ 5 ಸದಸ್ಯರೊಂದಿಗೆ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದಾಗ ಆಧಾರ್ ಕಾರ್ಡ್ ಇಲ್ಲದೇ ಲಸಿಕೆ ನೀಡುವುದಿಲ್ಲ ಎಂಬ ಪ್ರತಿಕ್ರಿಯೆ ಬಂದಿದೆ.

ಜೋಧ್ ಪುರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು, ನಮ್ಮ ಕುಟುಂಬದವರು ಕೊರೋನಾ ಅಪಾಯದ ಭೀತಿಯಲ್ಲೇ ಬದುಕುತ್ತಿದ್ದಾರೆ ಎಂದು ಶ್ಯಾಮ್ ಹಿರಾಣಿ ಹೇಳಿದ್ದಾರೆ. ಜೋಧ್ ಪುರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ತವರು ಜಿಲ್ಲೆಯಾಗಿದ್ದು, ರಾಜ್ಯ ಸರ್ಕಾರ ವಲಸಿಗರಿಗೆ ಲಸಿಕೆ ನೀಡುವುದಾಗಿ ಭರವಸೆ ನೀಡಿದೆ. ಆದರೆ ಇಡೀ ಪ್ರಕರಣ ಕೇಂದ್ರ ಸರ್ಕಾರದ ಅಂಗಳದಲ್ಲಿದೆ.

2019 ರ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪಾಕಿಸ್ತಾನದಿಂದ ಬಂದಿರುವ ಹಿಂದೂಗಳ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಈಗ ಸಿಎಎ ಜಾರಿಗೆ ಬಂದಿದ್ದು, ಶೀಘ್ರವೇ ಪೌರತ್ವ ಸಿಗಲಿದೆ ಎಂದು ವಲಸಿಗರು ಆಶಿಸಿದ್ದರು. ಆದರೆ ಕೊರೋನಾ ಅವಧಿಯಲ್ಲಿ ಅವರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ.

Leave a Reply

Your email address will not be published. Required fields are marked *