ಯಡಿಯೂರಪ್ಪ ಬದಲಾವಣೆ ಬಿಜೆಪಿಗೆ ಸುಲಭದ ಕೆಲಸವಲ್ಲ ! ಲಿಂಗಾಯತ ಸಮುದಾಯವನ್ನು ಎದುರುಹಾಕಿಕೊಳ್ಳಲು ಹೈಕಮಾಂಡ್ ಸಿದ್ಧವಿಲ್ಲ !

ಬೆಂಗಳೂರು: ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸುಲಭದ ಕೆಲಸವಲ್ಲ…ಅದನ್ನು ಅರಿತೇ ಈವರೆಗೂ ಬಿಜೆಪಿ ಹೈಕಮಾಂಡ್ ಕೈಕಟ್ಟಿ ಕೂತಿರುವುದು. ಬಲವಂತವಾಗಿ ಯಡಿಯೂರಪ್ಪರನ್ನು ಕೆಳಗಿಳಿಸಿದ್ದೆ ಆದಲ್ಲಿ ರಾಜ್ಯ ಬಿಜೆಪಿ ಒಡೆದು ಹೋಳಾಗುವುದು ಖಂಡಿತ. ಈ ಹಿಂದೆ ಇಂಥ ಕಾರ್ಯಕ್ಕೆ ಕೈಹಾಕಿದ್ದ ಹೈಕಮಾಂಡ್ ಅದರ ಫಲವನ್ನು ಅನುಭವಿಸಿದೆ. ರಾಜ್ಯದ ಇಡೀ ಲಿಂಗಾಯತ ಸಮುದಾಯವೇ ಯಡಿಯೂರಪ್ಪರಿಗೆ ಬೆನ್ನೆಲುಬಾಗಿ ನಿಂತಿದೆ.

ಬಿ. ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ವಿಚಾರದಲ್ಲಿ ಕೇಂದ್ರ ವರಿಷ್ಠರು ಎಚ್ಚರಿಕೆ ಹೆಜ್ಜೆ ಇಡಬೇಕು. ಯಡಿಯೂರಪ್ಪ ಸಿಎಂ ಹುದ್ದೆಯಿಂದ ಇಳಿಸುವ ವಿಚಾರದಲ್ಲಿ ಸ್ವಲ್ಪ ಯಾಮಾರಿದರೂ ಬಿಜೆಪಿಯ ಭವಿಷ್ಯ ರಾಜ್ಯದಲ್ಲಿ ಕರಾಳವಾಗಲಿದೆ.

ಮುಂದಿನ 2 ವರ್ಷಗಳಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದೆ, ಹೀಗಾಗಿ ಯಡಿಯೂರಪ್ಪ ನಾಯಕತ್ವ ಅಂತ್ಯಗೊಳಿಸಿ ಹೊಸ ಮುಖ ತರುವುದು ಕೇಂದ್ರ ನಾಯಕರಿಗೆ ಅನಿವಾರ್ಯವಾಗಿದೆ, ಆದರೆ ಲಿಂಗಾಯತ ಸಮುದಾಯದ ವಿರೋಧ ಕಟ್ಟಿಕೊಳ್ಳದೇ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಬೇಕಾಗಿದೆ.

ಹೀಗಾಗಿ ಯಡಿಯೂರಪ್ಪ ಅವರೇ ಸ್ವಾಭಾವಿಕವಾಗಿ ತಮ್ಮ ಹುದ್ದೆ ಬಿಟ್ಟುಕೊಡುವಂತೆ ಮಾಡುವುದು ಹೈಕಮಾಂಡ್ ಮುಂದಿರುವ ದೊಡ್ಡ ಸವಾಲಾಗಿದೆ. ಹರ್ಯಾಣ, ಉತ್ತರಾಖಂಡ್ ಮತ್ತು ಗುಜರಾತ್ ನಲ್ಲಿ ನಡೆದ ಅಧಿಕಾರ ಬದಲಾವಣೆಯಂತೆ ಕರ್ನಾಟಕದಲ್ಲೂ ಮಾಡುವ ವಿಶ್ವಾಸದಲ್ಲಿ ಕೇಂದ್ರ ಬಿಜೆಪಿ ನಾಯಕರಿದ್ದಾರೆ, ಆದರೆ ಅದರ ಜೊತೆಗೆ ಒಬ್ಬನೇ ನಾಯಕನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಭಾವನೆ ಬರದಂತೆ ಮುಂದಿನ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ.

ಕಳೆದ ಬಾರಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ ನಂತರ ಎದುರಾದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿತ್ತು, ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿ ಸ್ಪರ್ಧಿಸಿದರು.ಆದರೆ ಬಿಜೆಪಿ ಕೇವಲ 40 ಸೀಟು ಮಾತ್ರ ಪಡೆಯಿತು ಜೊತೆಗೆ ವೋಟ್ ಹಂಚಿಕೆಯಲ್ಲಿಯೂ ಜೆಡಿಎಸ್ ಗಿಂತ ಕಡಿಮೆ ಪಡೆದಿತ್ತು.

ಕೇಶವಬಾಯಿ ಪಟೇಲ್ ಕೂಡ ಬಹುದೊಡ್ಡ ನಾಯಕರಾಗಿದ್ದರು, ಆದರೆ ಹೊಸ ಮುಖ ಬೇಕೆಂಬ ಕಾರಣಕ್ಕೆ ನರೇಂದ್ರ ಮೋದಿ ಅವರನ್ನು ಗುಜರಾತ್ ಸಿಎಂ ಮಾಡಲಾಯಿತು, 75 ವರ್ಷ ಮೇಲ್ಪಟ್ಟವರು ಮುಖ್ಯಮಂತ್ರಿಯಾಗಿರಬಾರದೆಂಬ ಅಲಿಖಿತ ನಿಯಮವಿದೆ, ಆದರೆ ಯಡಿಯೂರಪ್ಪ ವಿಚಾರದಲ್ಲಿ ಪಕ್ಷ ಈ ನಿಯಮ ಮುರಿದಿದೆ.

ಅವರನ್ನು ವಾಪಸ್ ಪಕ್ಷಕ್ಕೆ ಕರೆತಂದ ಹೈಕಮಾಂಡ್ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡಿ ಸಿಎಂ ಪಟ್ಟ ಕೊಟ್ಟಿತ್ತು, ಆದರೆ ಸದ್ಯ ಬದಲಾವಣೆ ಸಮಯ ಬಂದಿದ್ದು, ಹೊಸ ನಾಯಕನಿಗೆ ಅವಕಾಶ ನೀಡಬೇಕು ಎಂಜು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೊಬ್ಬರು ತಿಳಿಸಿದ್ದಾರೆ.

2013 ರಲ್ಲಿ ಇದ್ದ ಪರಿಸ್ಥಿತಿ ಇಂದು ಇಲ್ಲ, ಎಷ್ಟು ಶಾಸಕರು ಯಡಿಯೂರಪ್ಪ ಅವರಿಗೆ ನಿಷ್ಠರಾಗಿದ್ದಾರೆ, ಒಂದು ವೇಳೆ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದರೇ ಎಷ್ಟು ಶಾಸಕರು ಅವರ ಜೊತೆ ಪಕ್ಷದಿಂದ ಹೊರ ನಡೆಯುತ್ತಾರೆ? 2013 ರಲ್ಲಿ ಕೇಂದ್ರ ಬಿಜೆಪಿ ಅಷ್ಟೊಂದು ಪ್ರಬಲವಾಗಿರಲಿಲ್ಲ, ಆದರೆ ಇಂದು ಪರಿಸ್ಥಿತಿ ಬೇರೆಯಾಗಿದೆ.

ಯಡಿಯೂರಪ್ಪ ಅವರೇ ತಮ್ಮ ವಯಸ್ಸು, ಆರೋಗ್ಯ ಮುಂತಾದ ವಿಚಾರಗಳನ್ನು ಅರ್ಥಮಾಡಿಕೊಂಡು ಹುದ್ದೆ ತ್ಯಜಿಸಬೇಕು ಎಂದು ರಾಜ್ಯ ಬಿಜೆಪಿ ಘಟಕದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಇನ್ನೂ ಯಡಿಯೂರಪ್ಪ ನಂತರ ಮುಂದಿನ ನಾಯಕರು ಯಾರು ಎಂಬ ಪ್ರಶ್ನೆ ಎದ್ದಿದೆ, ಎರಡನೇ ಸುತ್ತಿನ ನಾಯಕರು ಮುಂದಿದ್ದಾರೆ, ಮುರುಗೇಶ್ ನಿರಾಣಿ, ಬಸವರಾಜ್ ಬೊಮ್ಮಾಯಿ, ಸಿಟಿ ರವಿ, ಸುನೀಲ್ ಕುಮಾರ್ ಮತ್ತು ಅರವಿಂದ್ ಬೆಲ್ಲದ್ ಯಡಿಯೂರಪ್ಪ ಅವರೇ ತಮ್ಮ ನಾಯಕ ಎಂದು ಬೆಂಬಲ ಸೂಚಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಸಿಎಂ ಹುದ್ದೆಗಾಗಿ ಲಾಬಿ ನಡೆಸುತ್ತಿದ್ದಾರೆ.

ಯಡಿಯೂರಪ್ಪ ಬದಲಾವಣೆ ವಿಷಯ ಮುನ್ನೆಲೆಗೆ ಬರುತ್ತಿದ್ದಂತೆ ಹಲವು ವಿಷಯಗಳು ಚರ್ಚೆಯಾಗುತ್ತಿವೆ, ನಾಯಕತ್ವ ಬದಲಾವಣೆ ರಾತ್ರೋರಾತ್ರಿ ಸಾಧ್ಯವಿಲ್ಲ, ಸುಮಾರು 2 ತಿಂಗಳಾದರೂ ಬೇಕಾಗುತ್ತದೆ. ಈ ಸಂಬಂಧ ಚರ್ಚೆಗಳು ನಡೆಯುತ್ತಿವೆ, ಯಡಿಯೂರಪ್ಪ ಅವರಿಗೆ ಗೌರವ ಪೂರ್ಣ ಬೀಳ್ಕೋಡುಗೆ ಮಾಡಬೇಕೆಂದು ನಿರ್ಧರಿಸಲಾಗಿದೆ, ನಾಯಕತ್ವ ಬದಲಾವಣೆಯಾದ ಮೊದಲ ಆರು ತಿಂಗಳು ಕೇವಲ ಕೆಲಸ ಮಾಡಬೇಕಾಗುತ್ತದೆ, ಮುಂದಿನ ಆರು ತಿಂಗಳ ಸಾರ್ವಜನಿಕರ ವಿಶ್ವಾಸ ಗಳಿಸಿಕೊಳ್ಳಬೇಕಾಗುತ್ತದೆ. ಉಳಿದ 1 ವರ್ಷದಲ್ಲಿ ಮುಂದಿನ ಚುನಾವಣೆಗೆ ಸಿದ್ಧತೆ ನಡೆಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಯಡಿಯೂರಪ್ಪ ವಿರುದ್ಧ ಪಕ್ಷಪಾತ., ಭ್ರಷ್ಟಾಚಾರ, ಆಡಳಿತದಲ್ಲಿ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಮುಂತಾದ ಆರೋಪಗಳು ಕೇಳಿ ಬಂದಿವೆ. ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬಿಜೆಪಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲನುಭವಿಸಿದೆ, ಮಸ್ಕಿ ಉಪ ಚುನಾವಣೆ ಸಂದೇಶವೇನು? ಬಸವಕಲ್ಯಾಣ ಮತ್ತು ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಪ್ರಯಾಸದ ಗೆಲುವು ಸಾಧಿಸಿದೆ, ಲಿಂಗಾಯತರು ನಮಗೆ ಬೆಂಬಲ ನೀಡುತ್ತಿಲ್ಲ, ಐದು ದಿನಗಳಲ್ಲಿ ಮೂರು ಬಾರಿ ಸಚಿವರ ಖಾತೆ ಬದಲಾವಣೆಯಾಗಿದೆ, ಇದು ನಮ್ಮ ಪಕ್ಷದ ಬಗ್ಗೆ ಸಾರ್ವಜನಿಕರಿಗಿರುವ ಅಭಿಪ್ರಾಯ ಬದಲಾವಣೆ ಮಾಡುತ್ತಿದೆ ಎಂದು ಬಿಜೆಪಿ ಕಾರ್ಯಕಾರಿಣಿ ಸದಸ್ಯರೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *