ಯಡಿಯೂರಪ್ಪರ ನಂತರ ಅವರ ಪುತ್ರ ವಿಜಯೇಂದ್ರ ಸಿಎಂ; ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ

ಹಾಸನ: ಸೂರ್ಯ ಚಂದ್ರರಿರುವಷ್ಟೇ ಸತ್ಯ ಯಡಿಯೂರಪ್ಪ ಪೂರ್ಣಾವಧಿ ಮುಖ್ಯಮಂತ್ರಿ ಆಗಿರುತ್ತಾರೆ. ನಾನು ರಕ್ತದಲ್ಲಿ ಬರೆದುಕೊಡುತ್ತೇನೆ. ಯಡಿಯೂರಪ್ಪ ಪೂರ್ಣವಧಿ ಮುಖ್ಯಮಂತ್ರಿ ಆಗಿದ್ದು ಯಾವುದೇ ಬದಲಾವಣೆ ನಡೆಯುವುದಿಲ್ಲ ಎಂದು ಬಿಜೆಪಿ ಶಾಸಕ ಪ್ರೀತಂಗೌಡ ಅಭಿಪ್ರಾಯಪಟ್ಟಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ಸಭೆ ಕರೆದಿರುವ ವಿಚಾರ ಮತ್ತು ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರೀತಂ ಗೌಡ, ಮಾಧ್ಯಮ ಮಿತ್ರರಿಗೆ ಯಾರು ಮಾಹಿತಿ ಕೊಡುತ್ತಾರೋ ಗೊತ್ತಿಲ್ಲ. ಮುಂಬರುವ ವಿಧಾನಸಭೆ, ಲೋಕಸಭೆ ಚುನಾವಣೆ ಕೂಡ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತದೆ. ನಾಯಕತ್ವ ಬದಲಾವಣೆ ಕಪೋಲಕಲ್ಪಿತ ಎಂದು ಹೇಳಿದ್ದಾರೆ.

ಬೇರೆ ಶಾಸಕರು ದೆಹಲಿಗೆ ಹೋಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರ ವಕ್ತಾರ ಆಗುವುದಿಲ್ಲ. ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕರು. ಅವರು ನಾಯಕತ್ವದಲ್ಲಿ ರಾಜ್ಯ ಅಭಿವೃದ್ಧಿ ಹೊಂದಲಿದೆ. ಬಿ.ವೈ. ವಿಜಯೇಂದ್ರ ಅವರು ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ. ಅವರ ನೇತೃತ್ವದಲ್ಲಿ ಚುನಾವಣೆ ನಡೆದು ಅಧಿಕಾರಕ್ಕೆ ಬರುವ ಕಾಲವು ಬರುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದೇವೆ’ ಎಂದರು.

ಈ ಅವಧಿಯಲ್ಲಿ ಯಾರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತು ಬರುವುದಿಲ್ಲ. ಕೋವಿಡ್‌ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಎಲ್ಲಾ ಬಿಜೆಪಿ ಶಾಸಕರು ಅವರೊಂದಿಗೆ ಇದ್ದಾರೆ ಎಂದು ತಿಳಿಸಿದರು..

ಜೆಡಿಎಸ್ ಮತ್ತು ಕಾಂಗ್ರೆಸ್‌ನವರು ಬಿಜೆಪಿಯ ನಾಯಕತ್ವ ಬದಲಾವಣೆ ಬಗ್ಗೆ ಕನಸಲ್ಲೂ ಯೋಚನೆ ಮಾಡಬಾರದು. ಈ ಅವಧಿಯಲ್ಲಿ ಅಂತೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ನಾವೆಲ್ಲರೂ ಅವರ ಪರವಾಗಿ ಇರುತ್ತೇವೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *