ಮೇ ಒಂದೇ ತಿಂಗಳಲ್ಲಿ 14 ಬಾರಿ ಪೆಟ್ರೋಲ್-ಡೀಸಲ್ ಬೆಲೆ ಏರಿಸಿಕೆ; ಇಂದು ಎಷ್ಟು ಏರಿಕೆಯಾಗಿದೆ ನೋಡಿ….

ನವದೆಹಲಿ: ಕೊರೋನಾ ಮತ್ತು ಲಾಕ್ಡೌನ್ ಎಂಬ ಮಹಾಕಷ್ಟಗಳು ದೇಶವಾಸಿಗಳನ್ನು ಹಿಂದೆಂದು ಕಂಡುಕೇಳರಿಯದ ಕಷ್ಟಕ್ಕೆ ದೂಡಿರುವ ಈ ದುರ್ದಿನಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೇ ತಿಂಗಳೊಂದರಲ್ಲೇ 14 ಭಾರಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೆ ಸಹಜವಾಗಿ ನಿತ್ಯ ಬಳಕೆಯ ಬೇರೆಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಹಾಗಾಗಿ ಇದು ಕೊರೋನಾ ಕಷ್ಟಕಾಲದಲ್ಲಿ ಗ್ರಾಹಕರಾದ ಬಡ ಭಾರತೀಯನ ಮೇಲೆ ಬರೆ ಎಳೆದಂತಾಗಿದೆ. ಮೇ 4ರಿಂದ ‌ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದ್ದು ಮೇ 27ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 18 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 39 ಪೈಸೆ ಏರಿಕೆ ಮಾಡಿದೆ.

ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ -ಡೀಸೆಲ್ ಬೆಲೆ ಹೀಗಿದೆ….
ಬೆಂಗಳೂರು- ಪೆಟ್ರೋಲ್ 96.80 ರೂ., ಡೀಸೆಲ್ 89.70 ರೂ.
ಭೂಪಾಲ್- ಪೆಟ್ರೋಲ್ 101.77 ರೂ., ಡೀಸೆಲ್ 93.07 ರೂ.
ಜೈಪುರ – ಪೆಟ್ರೋಲ್ 100.17 ರೂ., ಡೀಸೆಲ್ 93.36 ರೂ.
ಮುಂಬೈ- ಪೆಟ್ರೋಲ್ 99.94 ರೂ., ಡೀಸೆಲ್ 91.87 ರೂ.
ಪಾಟ್ನಾ- ಪೆಟ್ರೋಲ್ 95.85 ರೂ., ಡೀಸೆಲ್ 89.87 ರೂ.ಚೆನ್ನೈ- ಪೆಟ್ರೋಲ್ 95.28 ರೂ., ಡೀಸೆಲ್ 89.39 ರೂ.
ಕೋಲ್ಕತ್ತಾ- ಪೆಟ್ರೋಲ್ 93.72 ರೂ., ಡೀಸೆಲ್ 87.46 ರೂ.
ದೆಹಲಿ- ಪೆಟ್ರೋಲ್ 93.68 ರೂ., ಡೀಸೆಲ್ 84.61 ರೂ.
ಲಕ್ನೋ- ಪೆಟ್ರೋಲ್ 91.21 ರೂ., ಡೀಸೆಲ್ 85 ರೂ.
ರಾಂಚಿ- ಪೆಟ್ರೋಲ್ 90.42 ರೂ., ಡೀಸೆಲ್ 89.35 ರೂ.

ಕೊರೋನಾ ಮೊದಲ ಅಲೆ ಸಂದರ್ಭದಲ್ಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸುತ್ತಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೇರಿದಂತೆ ಪ್ರತಿ ಪಕ್ಷಗಳು ದನಿ ಎತ್ತಿದ ಮೇಲೆ ದಿನ ಬಿಟ್ಟು ದಿನ ಬೆಲೆ ಏರಿಸಲು ಶುರು ಮಾಡಿತ್ತು. ಕೊರೋನಾ ಎರಡನೇ ಅಲೆ ಸಂದರ್ಭದಲ್ಲೂ ಅದೇ ಹಳೆ ಚಾಳಿಯನ್ನು ಮುಂದುವರೆಸಿದೆ.

ಮೇ ತಿಂಗಳಲ್ಲಿ ಈವರೆಗೆ ಒಟ್ಟು 14 ಭಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದೆ. ಪ್ರತಿ ಪೆಟ್ರೋಲ್ ಮೇಲೆ 3.28 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 3.88 ರೂಪಾಯಿ ಹೆಚ್ಚಳ ಮಾಡಲಾಗಿದೆ. ಮೇ 5ರಿಂದ ನಿರಂತರವಾಗಿ ಮೂರು ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿತ್ತು. ಇದಾದ ಮೇಲೆ ಮೂರು ದಿನ ಮಾತ್ರ ವಿರಮಿಸಿದ್ದ ಕೇಂದ್ರ ಸರ್ಕಾರ ಬಳಿಕ ಮೇ 10ರಂದು, ಮೇ 11ರಂದು ಮತ್ತು ಮೇ 12ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿತು. ಇದಾದ ಮೇಲೆ ದಿನ‌ ಬಿಟ್ಟು ದಿನ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಲಾಗುತ್ತಿದೆ.

Leave a Reply

Your email address will not be published. Required fields are marked *