ಬಾಲಿವುಡ್​ ನಟ ಸಂಜಯ್​ ದತ್​ಗೆ ಗೋಲ್ಡನ್​ ವೀಸಾ ನೀಡಿದ ಯುಎಇ ಸರ್ಕಾರ

ಬಾಲಿವುಡ್​ ನಟ ಸಂಜಯ್​ ದತ್​ ಅವರಿಗೆ ಯನೈಟೆಡ್​​ ಅರಬ್​ ಎಮಿರೇಟ್ಸ್​ (ಯುಎಇ) ಸರ್ಕಾರ ಗೋಲ್ಡನ್​ ವೀಸಾ ನೀಡಿದೆ. ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಅವರಿಗೆ ಗೋಲ್ಡನ್​ ವೀಸಾ ಸಿಕ್ಕಿರುವುದಕ್ಕೆ ಸಾಕಷ್ಟು ಜನರು ಶುಭಾಶಯ ಕೋರಿದ್ದಾರೆ.

ಗೋಲ್ಡನ್​ ವೀಸಾ ಪಡೆದುಕೊಂಡಿರುವ ಫೋಟೋ ಹಂಚಿಕೊಂಡಿರುವ ಸಂಜಯ್​ ದತ್​, ಆ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಲ್ಲಿನ ನಾಯಕರು ಹಾಗೂ ಅಧಿಕಾರಿಗಳಿಗೆ ಧನ್ಯವಾದ ಹೇಳಿದ್ದಾರೆ.

ಯುಎಇ ಪ್ರಧಾನ ಮಂತ್ರಿ ಹಾಗೂ ಉಪಾಧ್ಯಕ್ಷ ಶೇಖ್​ ಮೊಹ್ಮದ್​ ಬಿನ್​ ರಷೀದ್​ ಅಲ್​ ಮಕ್ತೌಮ್​ 10 ವರ್ಷಗಳ ಗೋಲ್ಡನ್​ ವೀಸಾ ನೀಡಲು ಕಳೆದ ಅಕ್ಟೋಬರ್​ ತಿಂಗಳಲ್ಲಿ ಅನುಮತಿ ನೀಡಿದ್ದರು. ಈ ಮೂಲಕ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಏನಿದು ಗೋಲ್ಡನ್​ ವೀಸಾ?
ಬೇರೆ ರಾಷ್ಟ್ರದ ಆಯ್ದ ವ್ಯಕ್ತಿಗಳಿಗೆ ಯುಎಇ ಗೋಲ್ಡನ್​ ವೀಸಾ​ ನೀಡುತ್ತದೆ. ಇದನ್ನು ಪಡೆದವರು ಯುಎಇಯಲ್ಲಿ ಯಾವುದೇ ವಿಶೇಷ ಒಪ್ಪಿಗೆ ಇಲ್ಲದೆ, ಬದುಕ ಬಹುದು, ಕೆಲಸ ಮಾಡಬಹುದು, ಉದ್ಯಮ ನಡೆಸಬಹುದು. ಯುಎಇಯಲ್ಲಿನ ಕಂಪೆನಿ ಮೇಲೆ ಶೇ. 100ರಷ್ಟು ಒಡೆತನ ಹೊಂದುವ ಅವಕಾಶ ಸಿಗಲಿದೆ. ಈ ಅವಕಾಶ ಈ ಮೊದಲು ಇರಲಿಲ್ಲ.

‘ಕೆಜಿಎಫ್​ 2’ನಲ್ಲಿ ಸಂಜಯ್​ ದತ್​
ಸಂಜಯ್​ ದತ್​ ‘ಕೆಜಿಎಫ್​ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮುಖ್ಯ ವಿಲನ್​ ಆಗಿ ಕಾಣಿಸಿಕೊಳ್ಳುತ್ತಿದ್ದು ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ 13ರಂದು ಸಿನಿಮಾ ತೆರೆಗೆ ಬರುತ್ತಿದೆ. ಆದರೆ, ಕೊವಿಡ್​ ಕಾರಣದಿಂದ ಸಿನಿಮಾ ಮುಂದೂಡಲ್ಪಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶೀಘ್ರವೇ ಸ್ಪಷ್ಟ ಚಿತ್ರಣ ಸಿಗಲಿದೆ. ಯಶ್​ ಮುಖ್ಯಭೂಮಿಕೆಯಲ್ಲಿದ್ದು, ಪ್ರಶಾಂತ್​ ನೀಲ್​ ನಿರ್ದೇಶನ ಈ ಚಿತ್ರಕ್ಕಿದೆ.

Leave a Reply

Your email address will not be published. Required fields are marked *