ಅಪಘಾತದಿಂದ ರಕ್ತದ ಮಡುವಿನಲ್ಲೇ ಒದ್ದಾಡಿದ ಆರೋಗ್ಯಾಧಿಕಾರಿ; ಸಹಾಯಕ್ಕೆ ಬಾರದ ತರೀಕೆರೆ ಶಾಸಕ ಸುರೇಶ್ ವಿರುದ್ಧ ಭಾರೀ ಆಕ್ರೋಶ

ಚಿಕ್ಕಮಗಳೂರು: ಅಪಘಾತ ಉಂಟಾಗಿ ಆರೋಗ್ಯಾಧಿಕಾರಿಯ ಪ್ರಾಣ ಹೋಗುತ್ತಿದ್ದರೂ ಬಿಜೆಪಿ ಶಾಸಕ ಸಹಾಯ ಮಾಡಲು ಕಾರಿನಿಂದ ಕೆಳಗಿಳಿಯದೆ ದರ್ಪ ತೋರಿದ ಘಟನೆ ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದಿದೆ. ತರೀಕೆರೆ ತಾಲೂಕಿನ ಬಿಜೆಪಿ ಶಾಸಕ ಡಿ.ಎಸ್. ಸುರೇಶ್ ಅವರ ಅಮಾನವೀಯ ವರ್ತನೆಗೆ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ. ಶಾಸಕ ಸುರೇಶ್ ಸ್ವಲ್ಪ ಮನಸು ಮಾಡಿದ್ದರೂ ಆರೋಗ್ಯಾಧಿಕಾರಿಯ ಪ್ರಾಣ ಉಳಿಯುತ್ತಿತ್ತು. ಆದರೆ, ಚಿಕಿತ್ಸೆ ಸಿಗುವುದು ತಡವಾಗಿದ್ದರಿಂದ ಅವರು ಸಾವನ್ನಪ್ಪಿದ್ದಾರೆ. ಅಷ್ಟಕ್ಕೂ ಆಗಿದ್ದೇನು ?

ಕೊರೋನಾ ಡ್ಯೂಟಿ ಮುಗಿಸಿ ತೆರಳುತ್ತಿದ್ದ ಹಿರಿಯ ಆರೋಗ್ಯಾಧಿಕಾರಿಗೆ ತರೀಕೆರೆಯ ಲಕ್ಕವಳ್ಳಿ ಕ್ರಾಸ್ ಬಳಿ ಅಪಘಾತವಾಗಿತ್ತು. ಆರೋಗ್ಯಾಧಿಕಾರಿ ರಮೇಶ್ ಅವರ ಬೈಕ್​ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿತ್ತು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲು ಸ್ಥಳೀಯರು ಆ್ಯಂಬುಲೆನ್ಸ್​ಗೆ ಫೋನ್ ಮಾಡಿದ್ದರು. ಆದರೂ ಆ್ಯಂಬುಲೆನ್ಸ್ ಬಂದಿರಲಿಲ್ಲ. ಅಷ್ಟರಲ್ಲಿ ಅದೇ ಮಾರ್ಗದಲ್ಲಿ ಬಂದ ತರೀಕೆರೆ ಬಿಜೆಪಿ ಶಾಸಕ ಡಿ.ಎಸ್. ಸುರೇಶ್ ಆರೋಗ್ಯಾಧಿಕಾರಿ ರಮೇಶ್​ಗೆ ಸಹಾಯ ಮಾಡಲು ಕಾರಿನಿಂದ ಕೆಳಿಗೆ ಇಳಿಯಲೇ ಇಲ್ಲ.

ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ರಕ್ತದ ಮಡುವಿನಲ್ಲೇ ಒದ್ದಾಡಿದ ಕೊರೋನಾ ವಾರಿಯರ್ ಆರೋಗ್ಯಾಧಿಕಾರಿ ನೋವಿನಿಂದ ನರಳಾಡುತ್ತಿದ್ದರೂ ಶಾಸಕ ಸುರೇಶ್ ಸಹಾಯ ನೀಡಲಿಲ್ಲ. ಅಪಘಾತ ಸಂಭವಿಸಿ ಅರ್ಧ ಗಂಟೆಯ ಬಳಿಕ ಆ್ಯಂಬುಲೆನ್ಸ್​ನಲ್ಲಿ ಅವರನ್ನು ಶಿವಮೊಗ್ಗಕ್ಕೆ ರವಾನೆ ಮಾಡಲಾಯಿತು. ಆದರೆ, ತೀವ್ರ ರಕ್ತಸ್ರಾವದಿಂದ ಮಾರ್ಗಮಧ್ಯೆ ಆರೋಗ್ಯಾಧಿಕಾರಿ ರಮೇಶ್ ಸಾವನ್ನಪ್ಪಿದ್ದಾರೆ. ಮಾನವೀಯತೆ ಮರೆತು ದರ್ಪ ತೋರಿದ ತರೀಕೆರೆ ಶಾಸಕರ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *