ಅನಂತ್ ಕುಮಾರ್ ಹೆಗ್ಡೆ ದೂರಿದಂತೆ ಕೊಲೆಗೆ ಸಂಚು ನಡೆದಿಲ್ಲ: ಪ್ರಾಥಮಿಕ ತನಿಖಾ ವರದಿ
ನ್ಯೂಸ್ ಕನ್ನಡ ವರದಿ-(18.04.18): ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ ಕುಮಾರ ಹೆಗ್ಡೆಯವರ ಬೆಂಗಾವಲು ಕಾರಿಗೆ ಹಾವೇರಿ ಜಿಲ್ಲೆಯ ರಾಣಿ ಬೆನ್ನೂರು ಎಂಬಲ್ಲಿ ಅಪಘಾತ ಸಂಭವಿಸಿದ್ದು, ಈ ಕುರಿತು ಅನಂತ್ ಕುಮಾರ್ ಹೆಗ್ಡೆ, ನನ್ನ ಕೊಲೆಗೆ ಸಂಚು ಹೂಡಲಾಗಿದ್ದು, ನಾನು ಅದೃಷ್ಟವಶಾತ್ ಸ್ವಲ್ಪದರದಲ್ಲೇ ಪಾರಾಗಿದ್ದೇನೆ. ನನ್ನ ಕಾರು ವೇಗವಾಗಿ ತೆರಳಿದ್ದರಿಂದ ನಾನು ಬಚಾವಾದೆ ಎಂದು ಹೇಳಿದ್ದರು. ಆದರೆ ಈ ಕುರಿತು ತನಿಖೆ ನಡೆಸಿದ ಪೊಲೀಸರು, ಅನಂತ್ ಕುಮಾರ್ ಹೆಗ್ಡೆ ಹೇಳಿದಂತೆ ಕೊಲೆಗೆ ಯಾವುದೇ ಸಂಚು ನಡೆದಿಲ್ಲ ಎಂದು ತಿಳಿಸಿದ್ದಾರೆ.
ಅನಂತ್ ಕುಮಾರ್ ಹೇಳಿದಂತೆ ಇದು ಕೊಲೆಯ ಸಂಚೇನಲ್ಲ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ. ಹಲಗೇರಿಯಿಂದ ಅಡ್ಡರಸ್ತೆಯ ಮೂಲಕ ಶಿವಮೊಗ್ಗಕ್ಕೆ ತೆರಳಲು ಏಕಾಏಕಿ ಲಾರಿ ಚಾಲಕ ತಿರುವು ತೆಗೆದು ಕೊಂಡ ಪರಿಣಾಮ ಅಪಘಾತ ಸಂಭವಿಸಿದೆ. ಆದರೆ, ಸಚಿವರು ದೂರಿದಂತೆ ಯಾವುದೇ ಹುನ್ನಾರಗಳು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿಲ್ಲ. ತನಿಖೆ ಮುಂದುವರಿದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಪರಶುರಾಂ ತಿಳಿಸಿದರು. ಲಾರಿ ಚಾಲಕ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಮುತ್ತಿನಕಟ್ಟಿಯ ನಾಸೀರ್ ಅಹ್ಮದ್ ಮೊಫಿನ್. ವಿಶ್ವಾಸ್ ರೋಡ್ ಲೈನ್ ನ ಲಾರಿಯಲ್ಲಿ ಧಾನ್ಯಗಳನ್ನು ಒಯ್ಯತ್ತಿದ್ದನು. ಮೊಬೈಲ್ ನಲ್ಲಿ ಮಾತನಾಡಿಕೊಂಡು ಮುಂದೆ ಬಂದ ಕಾರಣ ಏಕಾಏಕಿ ತಿರುವು ತೆಗೆದು ಕೊಂಡಿರುವುದಾಗಿ ಚಾಲಕ ಪೊಲೀಸರ ಮುಂದೆ ತಿಳಿಸಿದ್ದಾನೆ.