ಅತ್ಯಾಚಾರದಂತಹ ಗಂಭೀರ ಕೃತ್ಯವನ್ನು ಸಾಮಾನ್ಯೀಕರಿಸುವ ಪ್ರಯತ್ನ ಮಾತಾಡುತ್ತಿರುವ ಬಿಜೆಪಿ ತಾಲಿಬಾನ್ ಮನಸ್ಥಿತಿ ಹೊಂದಿದೆ: ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರುಗಳ ಅಸೂಕ್ಷ್ಮ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

‘ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಅತ್ಯಾಚಾರದ ಘಟನೆಗಳು ನಡೆದಿವೆ’ ಎಂದು ಸಚಿವ ಶಿವರಾಂ ಹೆಬ್ಬಾರ್ ಹೇಳಿದ್ದರು. ಇದಕ್ಕೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ‘ನಡೆದಿದೆ ಸ್ವಾಮಿ, ಆದರೆ ಆಗ ಯಾರೂ ಹೊಣೆಗೇಡಿತನ ಪ್ರದರ್ಶಿಸಲಿಲ್ಲ, ಅಸಂಬದ್ಧ ಮಾತುಗಳನ್ನಾಡಲಿಲ್ಲ. ಅತ್ಯಾಚಾರದಂತಹ ಗಂಭೀರ ಕೃತ್ಯವನ್ನು ಸಾಮಾನ್ಯೀಕರಿಸುವ ಪ್ರಯತ್ನ ಮಾತಾಡುತ್ತಿರುವ ಬಿಜೆಪಿ ತಾಲಿಬಾನ್ ಮನಸ್ಥಿತಿ ಹೊಂದಿದೆ’ ಎಂದು ಆರೋಪಿಸಿದೆ.

ಬಿಜೆಪಿ ಪಾಲಿಗೆ “ಬೇಟಿ ಬಚಾವೋ” ಎಂಬ ಘೋಷಣೆ ಮೋದಿ ಫೋಟೋ ಇರುವ ಜಾಹಿರಾತಿಗೆ ಮಾತ್ರ! ಎಂದು ಕಿಡಿಕಾರಿದೆ. ಸಚಿವರ ಹೇಳಿಕೆಗಳ ಅಸಲಿ ಅರ್ಥ ನಿಮ್ಮ ಹೆಣ್ಣುಮಕ್ಕಳನ್ನು ನೀವೇ ಬಚಾವು ಮಾಡಿಕೊಳ್ಳಿ ಬಿಜೆಪಿ ಸರ್ಕಾರದಿಂದ ಅಸಾಧ್ಯ ಎಂದು ಕಾಂಗ್ರೆಸ್ ವ್ಯಾಖ್ಯಾನಿಸಿದೆ.

ಎಲ್ಲಾ ಕಡೆ ಪೊಲೀಸ್ ರಕ್ಷಣೆ ನೀಡಲು ಅಸಾಧ್ಯವೆಂದು ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಹೇಳಿಕೆಯೇ ಇದಕ್ಕೆ ನಿದರ್ಶನ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.‌

ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಕೆಲವು ಸಚಿವರು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡುವ ಯತ್ನ ನಡೆಸುತ್ತಿದ್ದಾರೆ ಎಂದ ಗೃಹ ಸಚಿವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಗೃಹ ಸಚಿವರ ಹೇಳಿಕೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಕ್ಷಮೆಯಾಚನೆ ಮಾಡಿದ್ದಾರೆ. ಅಲ್ಲದೆ ಹೇಳಿಕೆಯನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ.

ಮಂಗಳವಾರ ಮೈಸೂರಿನ ಚಾಮುಂಡೇಶ್ವರಿ ಬೆಟ್ಟ ತಪ್ಪಲಿನ ಪ್ರದೇಶದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ವಿದ್ಯಾರ್ಥಿಯ ಗೆಳೆಯನ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಸದ್ಯ ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿ ಮೈಸೂರಿನ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಅತ್ಯಾಚಾರ ಪ್ರಕರಣ ನಡೆದು ಈವರೆಗೂ ಆರೋಪಿಗಳ ಬಂಧನ ಆಗಿಲ್ಲ. ಪ್ರಕರಣದ ತನಿಖೆ ಮುಂದುವರಿದಿದ್ದು ಹಲವರ ವಿಚಾರಣೆ ನಡೆಸಲಾಗಿದೆ. ಈ ನಡುವೆ ಪೊಲೀಸರ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *