ರಾಜ್ಯದಲ್ಲಿ ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಿದ ಕರ್ನಾಟಕ ಸರ್ಕಾರ ! ಇಲ್ಲಿದೆ ಸಂಪೂರ್ಣ ಮಾಹಿತಿ…

ಬೆಂಗಳೂರು: ಹಲವು ಒತ್ತಡಗಳ ನಡುವೆಯೇ ರಾಜ್ಯದಲ್ಲಿ 5 ದಿನಗಳ ಕಾಲ ಗಣೇಶೋತ್ಸವ ಆಚರಣೆಗೆ ಕರ್ನಾಟಕ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.

ರಾಜ್ಯದಾದ್ಯಂತ ಐದು ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಭಾನುವಾರ ನಡೆದ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದ ಉನ್ನತಮಟ್ಟದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ವಿಧಿಸಲಾಗಿರುವ ನಿಬಂಧನೆಗಳು ಇಂತಿವೆ…

 • 5 ದಿನ ಮಾತ್ರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರದಿಂದ ಅವಕಾಶ
 • ಗರಿಷ್ಠ 5 ದಿನಗಳಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ಮಾಡಬೇಕು
 • ನಗರ ಪ್ರದೇಶಗಳಲ್ಲಿ ಪ್ರತಿ ವಾರ್ಡ್‌ಗೆ ಕೇವಲ 1 ಸಾರ್ವಜನಿಕ ಗಣೇಶ ಮೂರ್ತಿಯನ್ನು ಮಾತ್ರ ಪ್ರತಿಷ್ಠಾಪನೆ ಮಾಡಬೇಕು
 • ಪ್ರತಿ ವಾರ್ಡ್‌ನ ಎಲ್ಲ ಗಣೇಶೋತ್ಸವ ಮಂಡಳಿಗಳೂ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬಂದು ಒಂದು ಮೂರ್ತಿ ಪ್ರತಿಷ್ಠಾಪಿಸಬೇಕು
 • ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಅಂತಿಮ ನಿರ್ಧಾರ ಕೈಗೊಳ್ಳಬೇಕು
 • ಹಳ್ಳಿಗಳಲ್ಲಿ ಕೂಡಾ ಪ್ರತಿ ಹಳ್ಳಿಗೆ ಕೇವಲ 1 ಸಾರ್ವಜನಿಕ ಗಣೇಶ ಮೂರ್ತಿಯನ್ನು ಮಾತ್ರ ಪ್ರತಿಷ್ಠಾಪನೆ ಮಾಡಬೇಕು
 • ಗ್ರಾಮಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಆಯಾ ತಾಲ್ಲೂಕು ಹಾಗೂ ಜಿಲ್ಲಾಡಳಿತದ ಅನುಮತಿ ಪಡೆಯಬೇಕಾದ್ದು ಕಡ್ಡಾಯ
 • ಶಾಲೆ ಹಾಗೂ ಕಾಲೇಜುಗಳಲ್ಲಿ ಯಾವುದೇ ಕಾರಣಕ್ಕೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ
 • ಸಾರ್ವಜನಿಕ ಗಣೇಶೋತ್ಸವಕ್ಕೆ ಆಯಾ ಪ್ರದೇಶ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯೋದು ಕಡ್ಡಾಯ
 • ಗಣೇಶೋತ್ಸವ ಸ್ಥಳದಲ್ಲಿ ಗರಿಷ್ಠ 50 x 50 ವಿಸ್ತೀರ್ಣದ ಪೆಂಡಾಲ್ ಹಾಕಲು ಮಾತ್ರ ಅನುಮತಿ
 • ಎಲ್ಲೆಂದರಲ್ಲಿ ಗಣೇಶನನ್ನು ಕೂರಿಸುವಂತಿಲ್ಲ. ನಿಗದಿತ ಸ್ಥಳದಲ್ಲಿ ಮಾತ್ರ ಗಣೇಶನನ್ನ ಇಡಲು ಅವಕಾಶ
 • ಪರಿಸರಕ್ಕೆ ಪೂರಕವಾದ ಗಣೇಶ ವಿಗ್ರಹಗಳನ್ನೇ ಕೂಡಿಸಬೇಕು. ಪಿಒಪಿ ಮೂರ್ತಿಗಳಿಗೆ ಅವಕಾಶವಿಲ್ಲ
 • ಮನೆಯಲ್ಲಿ ಗರಿಷ್ಠ 2 ಅಡಿ ಗಣೇಶ ವಿಗ್ರಹ, ಸಾರ್ವಜನಿಕವಾಗಿ ಗರಿಷ್ಠ 4 ಅಡಿ ಗಣೇಶ ವಿಗ್ರಹವನ್ನು ಮಾತ್ರ ಕೂರಿಸಬೇಕು
 • ಗಣೇಶೋತ್ಸವದ ವೇಳೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವಂತಿಲ್ಲ
 • ನೃತ್ಯ, ಡಿಜೆ, ಆರ್ಕೆಸ್ಟ್ರಾ ಸೇರಿದಂತೆ ಎಲ್ಲದಕ್ಕೂ ನಿರ್ಬಂಧ
 • ಗಣೇಶ ವಿಸರ್ಜನೆ ವೇಳೆ ಮೆರವಣಿಗೆ ಮಾಡುವಂತಿಲ್ಲ
 • ವಿಸರ್ಜನೆ ವೇಳೆ ವಾದ್ಯಗಳನ್ನು ಬಳಸುವಂತಿಲ್ಲ. ನಿಗದಿತ ಜನರು ಮಾತ್ರ ವಿಸರ್ಜನೆಯಲ್ಲಿ ಭಾಗಿಯಾಗಬೇಕು
 • ಗಣೇಶ ಮೂರ್ತಿಗಳ ವಿಸರ್ಜನೆಗೂ ನಿಗದಿತ ಸ್ಥಳದಲ್ಲಿ ಮಾತ್ರ ಅನುಮತಿ
 • ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಗಣೇಶ ಮೂರ್ತಿ ಇಡೋದು, ವಿಸರ್ಜನೆ ಮಾಡೋದು ಆಗಬಾರದು
 • ಪಾಸಿಟಿವಿಟಿ ದರ ಶೇ. 2ಕ್ಕಿಂತಾ ಕಡಿಮೆ ಇರುವ ಪ್ರದೇಶಗಳಲ್ಲಿ ಮಾತ್ರ ಗಣೇಶ ಉತ್ಸವಕ್ಕೆ ಆಯಾ ಜಿಲ್ಲಾಡಳಿತ ಅನುಮತಿ ನೀಡಲಿದೆ
 • ಗಣೇಶನನ್ನು ಕೂರಿಸುವ ಸ್ಥಳದಲ್ಲಿ ಲಸಿಕಾ ಅಭಿಯಾನ ಕಾರ್ಯಕ್ರಮವನ್ನೂ ಮಾಡಬೇಕು
 • ಗಣೇಶನನ್ನು ಪ್ರತಿಷ್ಠಾಪಿಸುವ ಕಾರ್ಯದಲ್ಲಿ ತೊಡಗಿರುವವರು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು

ಹೀಗೆ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಹೇರಿದೆ. ಅಕ್ಟೋಬರ್, ನವೆಂಬರ್‌ನಲ್ಲಿ ಕೊರೊನಾ 3ನೇ ಅಲೆ ಆತಂಕ. ಹೀಗಾಗಿ, ಸೆಪ್ಟೆಂಬರ್ ತಿಂಗಳು ರಾಜ್ಯದ ಮಟ್ಟಿಗೆ ನಿರ್ಣಾಯಕ ಎಂದು ಹೇಳಿರುವ ಕಂದಾಯ ಸಚಿವ ಆರ್. ಅಶೋಕ್, ಷರತ್ತು ಬದ್ಧ ಅನುಮತಿ ನೀಡಿರೋದಾಗಿ ಪ್ರಕಟಿಸಿದ್ದಾರೆ.

ಕಳೆದ ಬಾರಿ ಗಣೇಶೋತ್ಸವದ ವೇಳೆ ಕೊರೊನಾ ತೀವ್ರವಾಗಿತ್ತು, ಈ ಬಾರಿ ಸ್ವಲ್ಪ ನಿರಾಳತೆ ಇದೆ. ಹೀಗಾಗಿ, ಗಂಟೆಗಟ್ಟಲೆ ತಜ್ಞರ ಜೊತೆ ಚರ್ಚಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಿವರಿಸಿದರು.

ಹಾಗೆ ನೋಡಿದ್ರೆ, ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕೆಂದು ಹಿಂದೂ ಪರ ಸಂಘಟನೆಗಳು ಹಾಗೂ ಕೆಲ ಬಿಜೆಪಿ ಶಾಸಕರೇ ಒತ್ತಡ ಹೇರಿದ್ದರು. ಇದೀಗ ಸರ್ಕಾರ ಅನುಮತಿಯನ್ನೇನೋ ನೀಡಿದೆ. ಆದ್ರೆ, ಸರ್ಕಾರ ವಿಧಿಸಿರುವ ಷರತ್ತುಗಳ ಕಟ್ಟುನಿಟ್ಟಿನ ಪಾಲನೆ ಆಗಬೇಕಿದೆ. ನಿಯಮ ಪಾಲನೆಯ ಮೇಲುಸ್ತುವಾರಿ ಯಾರು ವಹಿಸುತ್ತಾರೆ ಅನ್ನೋದು ಸದ್ಯದ ಪ್ರಶ್ನೆ. ಜೊತೆಗೆ ವಾರ್ಡ್‌ ಮಟ್ಟದಲ್ಲಿ ಎಲ್ಲರೂ ಚರ್ಚಿಸಿ ಒಮ್ಮತದ ನಿಲುವಿಗೆ ಬಂದು ಒಂದೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸೋದು ನಿಜಕ್ಕೂ ಸವಾಲೇ ಸರಿ. ಎಲ್ಲಕ್ಕಿಂತಾ ಹೆಚ್ಚಾಗಿ ಜನಾಶೀರ್ವಾದ ಯಾತ್ರೆ, ಚುನಾವಣೆ ವೇಳೆಯಲ್ಲೇ ಕೊರೊನಾ ನಿಯಮಗಳು ಪಾಲನೆ ಆಗಿರಲಿಲ್ಲ ಎಂಬ ಆರೋಪಗಳಿವೆ. ಹೀಗಿರುವಾಗ ಸಾರ್ವಜನಿಕ ಗಣೇಶೋತ್ಸವದ ವೇಳೆ ಎಷ್ಟರ ಮಟ್ಟಿಗೆ ನಿಯಮ ಪಾಲನೆ ಆಗುತ್ತೆ ಅನ್ನೋದು ಸದ್ಯದ ಪ್ರಶ್ನೆ.

Leave a Reply

Your email address will not be published. Required fields are marked *