ನಿಮ್ಮ ಗ್ರಾಮಗಳಿಗೆ ಬ್ರಾಹ್ಮಣರು ಪ್ರವೇಶಿಸಲು ಬಿಡಬೇಡಿ ಎಂದ ಛತ್ತೀಸಗಡ CM ಬಾಘೇಲ್ ಅವರ ತಂದೆ ವಿರುದ್ಧ ಎಫ್‌ಐಆರ್: ತಂದೆ ಹೇಳಿಕೆಯಿಂದ ನನಗೂ ಬೇಸರವಾಗಿದೆ ಎಂದ ಬಾಘೇಲ್

ರಾಯ್ಪುರ: ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರ ತಂದೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬ್ರಾಹ್ಮಣರನ್ನು ಬಹಿಷ್ಕಾರ ಮಾಡುವಂತೆ ಅವರು ನೀಡಿದ್ದ ಹೇಳಿಕೆಗಾಗಿ ರಾಜ್ಯ ಪೊಲೀಸರು ಈ ದೂರು ದಾಖಲಿಸಿದ್ದಾರೆ.

ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರ ತಂದೆ ನಂದ ಕುಮಾರ್ ಬಾಘೇಲ್, ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ‘ನಿಮ್ಮ ಗ್ರಾಮಗಳಿಗೆ ಬ್ರಾಹ್ಮಣರು ಪ್ರವೇಶಿಸಲು ಬಿಡಬೇಡಿ ಎಂದು ಭಾರತದ ಎಲ್ಲ ಗ್ರಾಮಸ್ಥರಿಗೂ ನಾನು ಮನವಿ ಮಾಡುತ್ತೇನೆ. ನಾನು ಇತರೆ ಎಲ್ಲ ಸಮುದಾಯಗಳ ಜತೆ ಮಾತನಾಡುತ್ತೇನೆ. ಅವರನ್ನು ನಾವು ಬಹಿಷ್ಕರಿಸಬಹುದು. ಅವರನ್ನು ವೋಲ್ಗಾ ನದಿ ತೀರಕ್ಕೆ ವಾಪಸ್ ಕಳುಹಿಸಬೇಕಿದೆ’ ಎಂದು ಹೇಳಿದ್ದರು.

ಸರ್ವ ಬ್ರಾಹ್ಮಣ ಸಮಾಜ ಸಂಸ್ಥೆಯು ಡಿಡಿ ನಗರ ಪೊಲೀಸರಿಗೆ ನೀಡಿದ ದೂರಿನ ಅನ್ವಯ, ನಂದ ಕುಮಾರ್ ಬಾಘೇಲ್ ವಿರುದ್ಧ ಶನಿವಾರ ತಡರಾತ್ರಿ, ಐಪಿಸಿ ಸೆಕ್ಷನ್ 153ಎ (ವಿಭಿನ್ನ ಗುಂಪುಗಳ ನಡುವೆ ವೈರತ್ವ ಪ್ರಚೋದಿಸುವುದು) ಮತ್ತು 505 (1) (ಬಿ) (ಭಯ ಮೂಡಿಸುವ ಉದ್ದೇಶದ ಕೃತ್ಯ) ಅಡಿ ಎಫ್‌ಐಆರ್ ದಾಖಲಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಕಾನೂನು ಸರ್ವೋಚ್ಛ. ತಮ್ಮ ಸರ್ಕಾರ ಅದಕ್ಕೆ ಬದ್ಧವಾಗಿದೆ ಎಂದಿದ್ದಾರೆ.

‘ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಆ ವ್ಯಕ್ತಿ 86 ವರ್ಷ ವಯಸ್ಸಿನ ನನ್ನ ತಂದೆಯೇ ಇರಬಹುದು. ಛತ್ತೀಸಗಡ ಸರ್ಕಾರವು ಪ್ರತಿ ಧರ್ಮ, ವರ್ಗ, ಸಮುದಾಯ ಮತ್ತು ಅವರ ಭಾವನೆಗಳನ್ನು ಗೌರವಿಸುತ್ತದೆ. ನನ್ನ ತಂದೆ ನಂದ ಕುಮಾರ್ ಬಾಘೇಲ್ ಅವರು ನಿರ್ದಿಷ್ಟ ಸಮುದಾಯದ ಕುರಿತು ಮಾಡಿರುವ ಹೇಳಿಕೆಯು ಕೋಮು ಶಾಂತಿಯನ್ನು ಕದಡಿದೆ. ಅವರ ಹೇಳಿಕೆಯಿಂದ ನನಗೂ ಬೇಸರವಾಗಿದೆ’ ಎಂದು ತಿಳಿಸಿದ್ದಾರೆ.

‘ನಮ್ಮ ರಾಜಕೀಯ ದೃಷ್ಟಿಕೋನ ಮತ್ತು ನಂಬಿಕೆಗಳು ಸಂಪೂರ್ಣ ವಿಭಿನ್ನವಾಗಿವೆ. ಮಗನಾಗಿ ಅವರನ್ನು ಗೌರವಿಸುತ್ತೇನೆ. ಆದರೆ, ಸಾರ್ವಜನಿಕ ಸುವ್ಯವಸ್ಥೆಯನ್ನು ಕದಡುವಷ್ಟು ಗಂಭೀರವಾಗಿರುವ ಅವರು ಮಾಡಿರುವ ತಪ್ಪನ್ನು ಮುಖ್ಯಮಂತ್ರಿಯಾಗಿ ಕ್ಷಮಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

Leave a Reply

Your email address will not be published. Required fields are marked *