ಕಾಂಗ್ರೆಸ್‌ನ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನ

ಮಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕ, ರಾಜ್ಯಸಭೆ ಸದಸ್ಯ ಮತ್ತು ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ (80) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿರುವ ಅವರು ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.

ಮನೆಯಲ್ಲಿ ವ್ಯಾಯಾಮ ಮಾಡುತ್ತಿರುವಾಗ ಕುಸಿದು ಬಿದ್ದು ತೀವ್ರವಾದ ಆಂತರಿಕ ಗಾಯಗಳಾಗಿದ್ದ ಪರಿಣಾಮ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಮಾ.27, 1941 ರಲ್ಲಿ ಜನಿಸಿದ್ದ ಆಸ್ಕರ್ ಫರ್ನಾಂಡಿಸ್, ಐಎನ್ ಸಿಯಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿ ಅನುಭವವುಳ್ಳ ನಾಯಕರಾಗಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿದ್ದಷ್ಟೇ ಅಲ್ಲದೇ ರಾಹುಲ್ ಗಾಂಧಿ ಅವರಿಗೂ ಆಸ್ಕರ್ ಆಪ್ತರಾಗಿದ್ದರು.

ಡಾ.ಮನಮೋಹನ್ ಸಿಂಗ್ ಅವರ ಯುಪಿಎ ಮೊದಲ ಸರ್ಕಾರದಲ್ಲಿ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ರಾಜ್ಯ ಖಾತೆ ಸಚಿವ (ಸ್ವತಂತ್ರ ನಿರ್ವಹಣೆ)ರಾಗಿದ್ದ ಆಸ್ಕರ್ ಫರ್ನಾಂಡಿಸ್ ಯುಪಿಎ-2 ನಲ್ಲಿ ಸಾರಿಗೆ, ರಸ್ತೆ ಹಾಗೂ ಹೆದ್ದಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

1980 ರಲ್ಲಿ 7 ನೇ ಲೋಕಸಭೆಗೆ ಉಡುಪಿ ಕ್ಷೇತ್ರದಿಂದ ಮೊದಲಬಾರಿ ಸಂಸತ್ ಗೆ ಆಯ್ಕೆಯಾಗಿದ್ದ ಆಸ್ಕರ್ ಫರ್ನಾಂಡಿಸ್ 1984, 1989, 1991, 1996 ರಲ್ಲಿ ಸತತವಾಗಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1998 ರಲ್ಲಿ ರಾಜ್ಯಸಭೆಗೆ ಮೊದಲ ಬಾರಿ ಆಯ್ಕೆಯಾದ ಅವರು, 2004 ರಲ್ಲಿ ಮರು ಆಯ್ಕೆಯಾದರು. 2004-2009 ರಲ್ಲಿ ಕೇಂದ್ರ ಸಚಿವರಾಗಿ ಸಾಂಖ್ಯಿಕ ಹಾಗೂ ಯೋಜನಾ ಜಾರಿ ಸಚಿವಾಲಯ, ಎನ್ಆರ್ ಐ ವ್ಯವಹಾರಗಳ ಖಾತೆ, ಯುವಜನ ಕ್ರೀಡಾ ಖಾತೆ, ಕಾರ್ಮಿಕ ಹಾಗೂ ಉದ್ಯೋಗ ಖಾತೆಗಳಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದರು. ಬೆಂಗಳೂರಿನ ಐಐಎಸ್ ಸಿ ಕೌನ್ಸಿಲ್ ನ ಸದಸ್ಯರಾಗಿಯೂ ಆಸ್ಕರ್ ಫರ್ನಾಂಡಿಸ್ ಕಾರ್ಯನಿರ್ವಹಿಸಿ ಅನುಭವ ಹೊಂದಿದ್ದಾರೆ.

Leave a Reply

Your email address will not be published. Required fields are marked *