ಇನ್ಮುಂದೆ ಒಂದೇ ಒಂದು ದೇವಸ್ಥಾನ ಒಡೆಯಲು‌ ನಾವು ಬಿಡುವುದಿಲ್ಲ: ಸಚಿವ ಕೆ.ಎಸ್ ಈಶ್ವರಪ್ಪ

ಬೆಂಗಳೂರು: ಮೈಸೂರಿನ ನಂಜನಗೂಡಿನಲ್ಲಿ ದೇವಸ್ಥಾನ ಒಡೆದ ಪ್ರಕರಣ ತಪ್ಪು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ಮಾತನಾಡಿದ ಅವರು, ಮೈಸೂರು ದೇವಸ್ಥಾನ ತೆರವು ಪ್ರಕರಣಕ್ಕೆ ಖಂಡನೆ ವ್ಯಕ್ತಪಡಿಸಿದರು.

ಸಿಎಂಗೆ, ಸಂಬಂಧಪಟ್ಟ ಸಚಿವರಿಗೆ ಹೇಳದೆ ದೇವಸ್ಥಾನ ತೆರವುಗೊಳಿಸಿದ್ದು ತಪ್ಪು. ಡಿಸಿ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಏನೇ ಹೇಳಬಹುದು, ಆದರೆ ದೇವಸ್ಥಾನಗಳ ರಕ್ಷಣೆ‌ ಮಾಡುವುದು ಅಗತ್ಯವಿದೆ ಎಂದರು.

ಡಿಸಿಗಳು ತುರ್ತಾಗಿ ಇಂತಹ ಕ್ರಮಕ್ಕೆ ಮುಂದಾಗಬಾರದು. ನಾನು ಸಿಎಂ ಜತೆ ಈ ವಿಚಾರವಾಗಿ ಚರ್ಚೆ ಮಾಡುತ್ತೇನೆ.‌ ಇನ್ಮುಂದೆ ಒಂದೇ ಒಂದು ದೇವಸ್ಥಾನ ಒಡೆಯಲು‌ ನಾವು ಬಿಡುವುದಿಲ್ಲ ಎಂದು ಹೇಳಿದರು.

ಇಡೀ ಕರ್ನಾಟಕ ರಾಜ್ಯದಲ್ಲಿ ದೇವಸ್ಥಾನ ಒಡೆಯುವ ಆತಂಕ ಭಯ ವ್ಯಕ್ತವಾಗಿದೆ. ಬಿಜೆಪಿ ಸರ್ಕಾರ ಇರುವಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದೇವಸ್ಥಾನ ಒಡೆದು ಹಾಕಿದ್ದು ತಪ್ಪು. ಸುಪ್ರಿಂ ಕೋರ್ಟ್ ಅನೇಕ ಆದೇಶಗಳು ಬೇಕಾದಷ್ಟಿವೆ. ಸಂಸ್ಕೃತಿ ನಂಬಿಕೊಂಡು ಇರುವಂತ ಪಕ್ಷ ಬಿಜೆಪಿ.‌ ದೇವಸ್ಥಾನ ತೆರವು ಬಗ್ಗೆ ನಂದಂತೂ ಒಪ್ಪಿಗೆ ಇಲ್ಲ ಎಂದರು.

ಒಂದೇ ಒಂದು ದೇವಸ್ಥಾನ ಒಡೆಯುವುದು ತಪ್ಪು. ಯಾಕೆ ದೇವಸ್ಥಾನ ಮಾತ್ರ ಮುಟ್ಟಿದರು ಅನ್ನೋದು ಕೂಡ ಪ್ರಶ್ನೆಯೇ?ಕಾಂಗ್ರೆಸ್ ನಾಯಕರು ಹೇಳಿದ್ದರಲ್ಲೂ ಯಾವುದೇ ತಪ್ಪಿಲ್ಲ. ಈಗಲಾದರೂ ಕಾಂಗ್ರೆಸ್ ನಾಯಕರಿಗೆ ದೇವಸ್ಥಾನ ಉಳಿಸಬೇಕು ಅಂತ ಅನಿಸಿದೆಯಲ್ಲ ಅದು ಮುಖ್ಯ ಎಂದರು.

ಯಾರ ವಿರುದ್ದ ಕ್ರಮ ಆನ್ನೋದು ನನ್ನ ಉದ್ದೇಶವಲ್ಲ.‌ಆದರೆ ಇಡೀ ರಾಜ್ಯದಲ್ಲಿ ದೇವಸ್ಥಾನಗಳನ್ನು ಯಾರೂ ಒಡೆಯಬಾರದು ಈ ಸಂಬಂಧ ಸಿಎಂ ಜೊತೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ತೇವೆ. ಎಷ್ಟೇ ದೇವಸ್ಥಾನಗಳನ್ನು ಪಟ್ಟಿ ಮಾಡಿರಲಿ, ಯಾವುದನ್ನೂ ಒಡೆಯಬಾರದು ಎಂದು ಹೇಳಿದರು.

ನಂಜನಗೂಡು ದೇವಸ್ಥಾನ ತೆರವು ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಸದನದಲ್ಲೂ ಈ ವಿಚಾರವಾಗಿ ಚರ್ಚೆ ನಡೆಯಲಿದೆ. ಘಟನೆಯ ಕುರಿತಾದ ವಿವರವನ್ನು ವಿಧಾನಸಭೆಯಲ್ಲಿ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *